ಅಮರಾವತಿ: ಸರ್ಕಾರದ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಈ ಹಿಂದೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಎನ್ ಸಂಜಯ್ ಅವರನ್ನು ಆಂಧ್ರ ಪ್ರದೇಶ ಸರ್ಕಾರ ಬುಧವಾರ ಅಮಾನತುಗೊಳಿಸಿದೆ.
ಇದರೊಂದಿಗೆ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಮಾನತುಗೊಳ್ಳುತ್ತಿರುವ ನಾಲ್ಕನೆ ಐಪಿಎಸ್ ಅಧಿಕಾರಿಯಾಗಿದ್ದಾರೆ.
ವಿಜಿಲೆನ್ಸ್ ಮತ್ತು ಎನ್ಫೋರ್ಸ್ಮೆಂಟ್(ವಿ & ಇ) ವಿಭಾಗದ ತನಿಖೆಯ ನಂತರ ಆಂಧ್ರಪ್ರದೇಶದ ವಿಪತ್ತು ನಿರ್ವಹಣೆ ಮತ್ತು ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ(ಎಡಿಜಿಪಿ) ಎನ್ ಸಂಜಯ್ ಅವರು ಸರ್ಕಾರದ 1 ಕೋಟಿ ರೂಪಾಯಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಆಂಧ್ರ ಪ್ರದೇಶ ಸರ್ಕಾರವು ಅವರನ್ನು ಅಮಾನತುಗೊಳಿಸಿದೆ.
ಸಂಜಯ್ ಅವರು ಈ ಹಿಂದೆ ಆಂಧ್ರ ಸಿಐಡಿ ಮುಖ್ಯಸ್ಥರಾಗಿದ್ದಾಗ ಕೌಶಲ್ಯ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದರು.
ಕಳೆದ ವರ್ಷ ಸೆಪ್ಟೆಂಬರ್ 23 ರಂದು ಸಿಐಡಿ ಅಧಿಕಾರಿಗಳು ನಂದ್ಯಾಲ್ನಲ್ಲಿ ನಾಯ್ಡು ಅವರನ್ನು ಬಂಧಿಸಿದ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಸಂಜಯ್ ವಹಿಸಿದ್ದರು.
ವಿಜಿಲೆನ್ಸ್ ಮತ್ತು ಎನ್ಫೋರ್ಸ್ಮೆಂಟ್ ವರದಿ ಪ್ರಕಾರ, ಸಂಜಯ್ ಅಧಿಕಾರಾವಧಿಯಲ್ಲಿ ವಿಪತ್ತು ನಿರ್ವಹಣೆ ಮತ್ತು ಅಗ್ನಿಶಾಮಕ ಸೇವೆಗಳ ವೆಬ್ ಪೋರ್ಟಲ್ ಮತ್ತು ಹಾರ್ಡ್ವೇರ್ ಪೂರೈಕೆ ಟೆಂಡರ್ಗಳಲ್ಲಿ ಅವ್ಯವಹಾರ ನಡೆದಿದೆ. ಈ ಸಂಬಂಧ ವಿಜಯವಾಡ ಮೂಲದ ಸೌತ್ರಿಕ ಟೆಕ್ನಾಲಜೀಸ್ ಮತ್ತು ಇನ್ಫ್ರಾ ಪ್ರೈವೇಟ್ ಲಿಮಿಟೆಡ್ನೊಂದಿಗೆ ಒಪ್ಪಂದ ಮಾಡಿಕೊಂಡು, 1.15 ಕೋಟಿ ರೂಪಾಯಿ ಹೆಚ್ಚುವರಿ ಪಾವತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.