ನವದೆಹಲಿ: ಪಂಜಾಬ್ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ದಿಗ್ಬಂಧನಗಳನ್ನು ತಕ್ಷಣವೇ ತೆರವುಗೊಳಿಸಲು ಕೇಂದ್ರ ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಈ ವಿಷಯ ಈಗಾಗಲೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿಯಿದ್ದು, ಈ ಕುರಿತ ಪುನರಾವರ್ತಿತ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು
ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇವೆ. ನೀವು ಮಾತ್ರ ಸಮಾಜದ ಆತ್ಮಸಾಕ್ಷಿಯ ಪಾಲಕರು ಅಲ್ಲ. ಪುನರಾವರ್ತಿತ ಅರ್ಜಿಗಳನ್ನು ಸಲ್ಲಿಸಬೇಡಿ. ಕೆಲವರು ಪ್ರಚಾರದ ಹಿತಾಸಕ್ತಿಗಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಮತ್ತೆ ಕೆಲವರು ಸುಖಾಸುಮ್ಮನೆ ನ್ಯಾಯಾಲಯೊಂದಿಗೆ ಆಟಕ್ಕಾಗಿ ಇಂತಹ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕುರಿತ ಪುನರಾವರ್ತಿತ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಂಜಾಬಿನ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡ ಅರ್ಜಿದಾರ ಗೌರವ್ ಲೂತ್ರಾ ಅವರಿಗೆ ತಿಳಿಸಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ರೈತರು ಮತ್ತೆ ಪ್ರತಿಭಟನೆ ಆರಂಭಿಸಿದ್ದು, ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ರೈತರ ಪ್ರತಿಭಟನೆಯಿಂದ ಪಂಜಾಬ್ನ ಸಂಪೂರ್ಣ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಅನಿರ್ದಿಷ್ಟ ಅವಧಿಯವರೆಗೆ ನಿರ್ಬಂಧಿಸಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ಹಳಿಗಳನ್ನು ಹೋರಾಟ ಮಾಡುವ ರೈತರಿಂದ ನಿರ್ಬಂಧಿಸದಂತೆ ನಿರ್ದೇಶನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.