ಪ್ರಯಾಗ್ರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty), ನಟಿ, ನಿರೂಪಕಿ ಅನುಶ್ರೀ (Anushree) ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್ (Kiran Raj) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ರಾಜ್ ಬಿ ಶೆಟ್ಟಿ ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಹಣೆಯಲ್ಲಿ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ಕುಂಭಮೇಳದಲ್ಲಿ ಭಾಗಿಯಾದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜ್ ಬಿ ಶೆಟ್ಟಿ, ನಾವು ಬೆಂಗಳೂರಿನ ಸ್ನೇಹಿತರ ಜೊತೆ ಕುಂಭಮೇಳಕ್ಕೆ ಆಗಮಿಸಿದ್ದೇವೆ. ನಿನ್ನೆ ನಾವು ಪವಿತ್ರ ಸ್ನಾನ ಮಾಡಿದೆವು ಎಂದು ತಿಳಿಸಿದರು.
ಮೌನಿ ಅಮಾವಾಸ್ಯೆಯಂದೇ ನೀವು ಸ್ನಾನ ಮಾಡಲು ತೆರಳಿದ್ದೀರಾ ಎಂಬ ಪ್ರಶ್ನೆಗೆ, ನಾವು ಹಾಗೆ ಯಾವುದೇ ಪ್ಲ್ಯಾನ್ ಮಾಡಿ ಬಂದಿಲ್ಲ. 144 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭ ಮೇಳದಲ್ಲಿ ಭಾಗವಹಿಸುವ ಸಲುವಾಗಿ ಬಂದಿದ್ದೇವೆ. ನಮ್ಮ ಅದೃಷ್ಟ ಎಂಬಂತೆ ಮೌನಿ ಅಮವಾಸ್ಯೆಯಂದೇ ನಮಗೆ ಸ್ನಾನ ಮಾಡುವ ಅದೃಷ್ಟ ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸಿದರು.
ಕೋಟ್ಯಂತರ ಜನರು ಇಲ್ಲಿ ಭಾಗವಹಿಸುತ್ತಿದ್ದಾರೆ. ಇಷ್ಟೊಂದು ಜನರನ್ನು ನಿರ್ವಹಣೆ ಮಾಡುವುದು ಬಹಳ ಕಷ್ಟ. ಪೊಲೀಸರು ಬಹಳ ಚೆನ್ನಾಗಿ ಕೆಲಸ ಮಾಡಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಹಳ ದೂರ ನಡೆದುಕೊಂಡೇ ಪವಿತ್ರ ಸ್ನಾನ ಮಾಡಲು ಬರಬೇಕು. ಆಧ್ಯಾತ್ಮಿಕವಾಗಿ ಇದೊಂದು ಪವಿತ್ರ ಕಾರ್ಯಕ್ರಮ. ಇಂದು ನಾವು ಅಖಾಡಗಳಿಗೆ ಭೇಟಿ ನೀಡಲಿದ್ದೇವೆ ಎಂದು ಹೇಳಿದರು.