ನವದೆಹಲಿ || Vande Bharat Express: ಬುಲೆಟ್‌ ರೈಲು ಮಾರ್ಗದಲ್ಲಿ ವಂದೇ ಭಾರತ್ ಸಂಚಾರ?

ನವದೆಹಲಿ || Vande Bharat Express: ಬುಲೆಟ್ ರೈಲು ಮಾರ್ಗದಲ್ಲಿ ವಂದೇ ಭಾರತ್ ಸಂಚಾರ?

ನವದೆಹಲಿ : ಮುಂಬೈ ಮತ್ತು ಅಹಮಬಾದ್‌ ನಡುವೆ ಬುಲೆಟ್‌ ರೈಲು ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ದೇಶದ ಮೊದಲ ಬುಲೆಟ್ ರೈಲು ಯೋಜನೆಯನ್ನು ಭಾರತ ಜಪಾನ್ ಸಹಯೋಗದಲ್ಲಿ ಮಾಡುತ್ತಿದ್ದು, 2026ರ ಅಂತ್ಯದಲ್ಲಿ ಈ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ನಿರೀಕ್ಷೆ ಮಾಡಲಾಗಿದೆ. ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಭಾರತೀಯ ರೈಲ್ವೆ ದೇಶದ ಮೊದಲ ಬುಲೆಟ್ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸಲು ಮುಂದಾಗಿದೆ. 2026ರಲ್ಲಿ ಈ ಮಾರ್ಗದಲ್ಲಿ ದೇಶದ ಅತಿ ವೇಗದ ರೈಲಾದ ವಂದೇ ಭಾರತ್ ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.

ಬುಲೆಟ್ ರೈಲು ಯೋಜನೆಗೆ ಜಪಾನ್ ರೈಲನ್ನು ಪೂರೈಕೆ ಮಾಡಲಿದೆ. ಆದರೆ ಜಪಾನ್‌ನಿಂದ ಬೋಗಿ ಬರುವುದು ತಡವಾಗುವ ಹಿನ್ನಲೆಯಲ್ಲಿ ವಂದೇ ಭಾರತ್ ರೈಲು ಓಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ ಎಂಬ ಮಾಹಿತಿ ಇದೆ.

1.08 ಲಕ್ಷ ಕೋಟಿ ರೂ. ಯೋಜನೆ: ಭಾರತದ ಮೊದಲ ಬುಲೆಟ್ ರೈಲು ಯೋಜನೆ ವೆಚ್ಚ ಸುಮಾರು 1.08 ಲಕ್ಷ ಕೋಟಿ ರೂ.ಗಳು. 508 ಕಿ. ಮೀ. ಮಾರ್ಗದಲ್ಲಿ ರೈಲು ಮಾರ್ಗ ಗುಜರಾತ್‌ನಲ್ಲಿ 352 ಕಿ. ಮೀ. ಹಾಗೂ ಮಹಾರಾಷ್ಟ್ರದಲ್ಲಿ 156 ಕಿ. ಮೀ. ದೂರವಿದೆ. ಸದ್ಯ ಮುಂಬೈ-ಅಹಮಬಾದ್‌ ರಸ್ತೆ ಸಂಚಾರ 6 ರಿಂದ 8 ಗಂಟೆ ತೆಗೆದುಕೊಳ್ಳಲಿದೆ. ಬುಲೆಟ್‌ ರೈಲಿನಲ್ಲಿ 3 ಗಂಟೆಗೆ ತಲು‍ಪಬಹುದಾಗಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಈಗಾಗಲೇ 508 ಕಿ. ಮೀ. ಮಾರ್ಗದಲ್ಲಿ ಅತ್ಯಾಧುನಿಕ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆ ಮಾಡಲು ಟೆಂಡರ್ ಕರೆಯಲಾಗಿದೆ. ಆದರೆ ಭಾರತ-ಜಪಾನ್ ನಡುವಿನ ಒಪ್ಪಂದದಂತೆ ರೈಲು ಬೋಗಿಗಳು ಭಾರತಕ್ಕೆ ಬರುವುದು ತಡವಾಗಲಿದೆ. ಆದ್ದರಿಂದ ಯೋಜನೆಯನ್ನು ಅಂದುಕೊಂಡ ಗಡುವಿನಲ್ಲಿ ಪೂರ್ಣಗೊಳಿಸುವುದು ಕಷ್ಟ ಎಂಬ ಮಾತಿದೆ.

ಬುಲೆಟ್ ರೈಲು ಯೋಜನೆ ಜಾರಿಗೊಳಿಸುತ್ತಿರುವ ಎನ್‌ಎಚ್‌ಎಸ್‌ಆರ್‌ಸಿಎಲ್‌ ಸಿಗ್ನಲಿಂಗ್, ಟೆಲಿಕಮ್ಯುನಿಕೇಶನ್, ಮೂಲ ಸೌಕರ್ಯ ಒದಗಿಸಲು ಟೆಂಡರ್ ಕರೆದಿದೆ. ಈ ಮೊದಲು ಜಪಾನ್ ತಂತ್ರಜ್ಞಾನದ ಸಿಗ್ನಲ್ ಅಳವಡಿಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಈಗ ದೇಶಿಯ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ.

ಜಪಾನ್ ಜೊತೆಗಿನ ಒಪ್ಪಂದದ ಕೆಲವು ಅಂಶಗಳ ತಕರಾರಿನ ಹಿನ್ನಲೆ ಬೋಗಿಗಳು ಯಾವಾಗ ಭಾರತಕ್ಕೆ ಬರಲಿವೆ? ಎಂಬುದು ಖಚಿತವಾಗಿಲ್ಲ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಬುಲೆಟ್ ರೈಲು ಯೋಜನೆಗೆ ಎಲೆಕ್ಟ್ರಾನಿಕ್ ರೈಲು ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದ್ದು, ಟೆಂಡರ್ ಆಹ್ವಾನಿಸಲಾಗಿದೆ.

2024ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜಪಾನ್‌ಗೆ ಭೇಟಿ ನೀಡಿ ಬುಲೆಟ್ ರೈಲು ಯೋಜನೆ ವಿಚಾರದಲ್ಲಿ ಇರುವ ಅಡೆತಡೆ ನಿವಾರಣೆ ಕುರಿತು ಸಭೆ ನಡೆಸಿದ್ದರು. ಈಗ ಕಾಮಗಾರಿ ಪೂರ್ಣಗೊಂಡರೆ ಇರುವ ಮೂಲ ಸೌಲಭ್ಯ ಬಳಕೆ ಮಾಡಿಕೊಂಡು ವಂದೇ ಭಾರತ್ ರೈಲು ಓಡಿಸಲು ತೀರ್ಮಾನಿಸಲಾಗಿದೆ.

ಬುಲೆಟ್ ರೈಲು ಯೋಜನೆಯ ಎರಡು ಬೋಗಿ ಬೆಂಗಳೂರು ನಗರದಲ್ಲಿ ತಯಾರಾಗಲಿದೆ. ಎರಡು ಬೋಗಿಯನ್ನು ಅಭಿವೃದ್ಧಿಪಡಿಸಲು ಸಮಗ್ರ ಬೋಗಿ ನಿರ್ಮಾಣ (ಐಸಿಎಫ್‌)ನಿಂದ ರೂ. 866.87 ಕೋಟಿ ಮೌಲ್ಯದ ಟೆಂಡರ್‌ ಅನ್ನು ಬಿಇಎಂಎಲ್‌ ಪಡೆದುಕೊಂಡಿದೆ.

Leave a Reply

Your email address will not be published. Required fields are marked *