ಬೆಳಗಾವಿ: ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಒದಗಿಸುವ ವಿಚಾರಕ್ಕೆ ಬೆಳಗಾವಿ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಮವಾರ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸಿ, ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ, ಬೆಳಗಾವಿ ಜನರ ಜೀವನಾಡಿ ಹಿಡಕಲ್ ಜಲಾಶಯದಿಂದ 0.5 ಟಿಎಂಸಿ ನೀರನ್ನು ಯಾವುದೇ ಕಾರಣಕ್ಕೂ ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗೆ ಬಿಡಬಾರದು ಎಂದು ಒತ್ತಾಯಿಸಿ, ಜಿಲ್ಲೆಯ ವಿವಿಧ ಮಠಾಧೀಶರು, ಮೌಲ್ವಿಗಳು, ಚರ್ಚ್ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು, ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ದಲಿತ ಸಂಘಟನೆಗಳು, ಎಂಇಎಸ್ ಸಂಘಟನೆ, ಬೆಳಗಾವಿ ನವೋದ್ಯಮಗಳ ಒಕ್ಕೂಟ, ರೈತ ಸಂಘಟನೆಗಳು, ಬೆಳಗಾವಿ ಬಾರ್ ಅಸೋಸಿಯೇಷನ್, ಪರಿಸರವಾದಿಗಳು ಪ್ರತಿಭಟನೆ ನಡೆಸಿದರು.
ಕೆಐಎಡಿಬಿ ರೂಪಿಸಿರುವ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಹೋರಾಟಗಾರರು, ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದ ಕಾರಣಕ್ಕೆ ಜಿಲ್ಲಾಧಿಕಾರಿ ಕೊಠಡಿ ಎದುರೇ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ಬಂದ ಅವರಿಗೆ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಕ್ಷೇತ್ರಕ್ಕೆ ನೀರು ಒಯ್ಯುವ ಯೋಜನೆಯ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಮನವಿ ಸಲ್ಲಿಸಿದರು.
ಕ.ರ.ವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ”ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಗಮನಕ್ಕೆ ತಾರದೇ ಆರಂಭಿಸಿರುವ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು. ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿಗಳು ಏಕೆ ಮೀನಮೇಷ ಎಣಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಬೆಳಗಾವಿಯಲ್ಲಿರುವ ಅನೇಕ ಕೈಗಾರಿಕೆಗಳಿಗೆ ನೀರು ಕೊಡುತ್ತಿಲ್ಲ. ಅದನ್ನು ಬಿಟ್ಟು ಧಾರವಾಡಕ್ಕೆ ನೀರು ಒಯ್ಯುತ್ತಿರುವುದು ಸರಿಯಲ್ಲ. ಹಾಗಾಗಿ, ನಾವೆಲ್ಲಾ ಒಟ್ಟಾಗಿ ಪ್ರತಿಭಟನೆಗೆ ಇಳಿದಿದ್ದೇವೆ. ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಆದ್ದರಿಂದ, ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ” ಎಂದರು.
ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ ಮಾಧ್ಯಮಗಳ ಜೊತೆ ಮಾತನಾಡಿ, ”ಕಾಡಾ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಹಿಡಕಲ್ ಜಲಾಶಯದಿಂದ ಅನಧಿಕೃತವಾಗಿ ನೀರು ಬಿಡಲಾಗುತ್ತಿದೆ. ಹಾಗಾಗಿ, ನಮ್ಮ ನೀರು ಉಳಿಸಲು ಪಕ್ಷಾತೀತವಾಗಿ ಹೋರಾಟಕ್ಕೆ ಇಳಿದಿದ್ದೇವೆ. ಕಾಮಗಾರಿ ಸ್ಥಳ ಬೇರೆ ಕಡೆ ಇದೆ. ನೀರು ಯಾವ ಸಂದರ್ಭದಲ್ಲಿ ಒಯ್ಯುತ್ತಾರೆ ಎಂಬ ಕುರಿತು ಯಾವ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಯಾರ ಅನುಮತಿ ಮೇರೆಗೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ಇಲ್ಲ. ಹಾಗಾಗಿ, 7 ದಿನಗಳೊಳಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಶಂಕರ ಗುಡಸ, ಎನ್.ಆರ್.ಲಾತೂರ್, ಬೀರಪ್ಪ ದೇಶನೂರ, ಆರ್.ಪಿ.ಪಾಟ ಮಲ್ಲೇಶ ಚೌಗುಲೆ, ವಿಕಾಸ ಕಲಘಟಗಿ ಸೇರಿ ಮತ್ತಿತರರು ಇದ್ದರು.