ಟೊರೊಂಟೊ: ಟೊರೊಂಟೊದ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಡೆಲ್ಟಾ ಏರ್ಲೈನ್ಸ್ ವಿಮಾನ ಅಪಘಾತಕ್ಕೀಡಾದ ನಂತರ ಕನಿಷ್ಠ 18 ಪ್ರಯಾಣಿಕರು ಗಾಯಗೊಂಡಿದ್ದಾರೆ. ಹಿಮಭರಿತ ನೆಲದ ಮೇಲೆ ವಿಮಾನ ಮಗುಚಿ ಬಿದ್ದಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ.
ಆರಂಭಿಕ ವರದಿಯಲ್ಲಿ ಯಾವುದೇ ಸಾವು- ನೋವುಗಳನ್ನು ಖಚಿತಪಡಿಸಿಲ್ಲ. ಗಾಯಗೊಂಡ 18 ಪ್ರಯಾಣಿಕರನ್ನು ಪ್ರದೇಶ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತದಿಂದ ತೊಂದರೆಯಾದವರತ್ತ ನಮ್ಮ ಗಮನ ಕೇಂದ್ರೀಕರಿಸಿರುವುದಾಗಿ ಡೆಲ್ಟಾ ಏರ್ ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಮಿನ್ನಿಯಾಪೋಲಿಸ್ನಿಂದ ಬರುತ್ತಿದ್ದ 80 ಜನರಿದ್ದ ವಿಮಾನ ರನ್ವೇಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಹಿನ್ನಲೆಯಲ್ಲಿ ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಎಲ್ಲಾ ವಿಮಾನಗಳನ್ನು ಏರ್ ಲೈನ್ಸ್ ರದ್ದುಗೊಳಿಸಿತ್ತು. ಘಟನೆ ನಂತರ ತುರ್ತು ಕಾರ್ಯಾಚರಣೆ ತಂಡಗಳು ಕಾರ್ಯಾಚರಣೆ ನಡೆಸಿರುವುದಾಗಿ ಟೊರೊಂಟಾ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದೆ.