ನವದೆಹಲಿ: ಭಾರತದ ಲಘು ಯುದ್ಧ ವಿಮಾನ (LCA -Light Combat Aircraft) Mk-1A ಉತ್ಪಾದನೆ ಮತ್ತು ಸೇರ್ಪಡೆಯಲ್ಲಿನ ವಿಳಂಬವನ್ನು ಪರಿಹರಿಸಲು ರಕ್ಷಣಾ ಸಚಿವಾಲಯವು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ (Rajesh Kumar Singh) ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ಹೇಳಿವೆ.
ಎಲ್‌ಸಿಎ ವಿಮಾನಗಳ ವಿತರಣೆಯಲ್ಲಿನ ವಿಳಂಬದ ಬಗ್ಗೆ ವಾಯುಪಡೆಯ (IAF) ಮುಖ್ಯಸ್ಥ ಎಪಿ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
LCA ಉತ್ಪಾದನೆಯಲ್ಲಿನ ಅಡಚಣೆಗಳನ್ನು ಗುರುತಿಸುವ ಮತ್ತು ಉತ್ಪಾದನೆಯನ್ನು ವೇಗಗೊಳಿಸಲು ಕ್ರಮಗಳನ್ನು ಶಿಫಾರಸು ಮಾಡುವ ಕಾರ್ಯವನ್ನು ಸಮಿತಿ ವಹಿಸಿಕೊಂಡಿದೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಒಂದು ತಿಂಗಳ ಗಡುವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಗಳ ವಿತರಣೆಯನ್ನು ತ್ವರಿತಗೊಳಿಸಲು ವಿಮಾನ ತಯಾರಿಕೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಸಮಿತಿಯೂ ಪರಿಶೀಲಿಸುತ್ತದೆ. ಮುಂದಿನ ದಶಕ ಮತ್ತು ಅದಕ್ಕೂ ಮೀರಿದ ಅವಧಿಯಲ್ಲಿ ವಾಯುಪಡೆಯು Mk-1, Mk-1A, ಮತ್ತು Mk-2 ಸೇರಿದಂತೆ ಸುಮಾರು 350 LCA ರೂಪಾಂತರಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.

ಸರ್ಕಾರದ ಆತ್ಮ ನಿರ್ಭರ ಭಾರತ್ ಉಪಕ್ರಮದ ಅಡಿಯಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಭಾರತದ ಪ್ರಯತ್ನದಲ್ಲಿ LCA ಕಾರ್ಯಕ್ರಮವು ನಿರ್ಣಾಯಕವಾಗಿದೆ. IAF ನ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸಮಿತಿಯ ಶಿಫಾರಸುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್‌ಸಿಎ ವಿಮಾನದ ಉತ್ಪಾದನೆ ನಿಧಾನ ಮತ್ತು ವಾಯುಸೇನೆಗೆ ಸೇರ್ಪಡೆ ವಿಳಂಬ ಬಗ್ಗೆ ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಏರೋ ಇಂಡಿಯಾ ಪ್ರದರ್ಶನದಲ್ಲಿ ವಿಮಾನವನ್ನು ಪರಿಶೀಲಿಸುವಾಗ ಅವರು ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಕಂಪನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ʻನಂಬಿಕೆ ಇಲ್ಲʼ ಎಂದು ಹೇಳಿದ್ದರು