ಮುಂಬೈ: ಕೊ* ಪ್ರಕರಣವೊಂದರಲ್ಲಿ ಆಪ್ತನ ಬಂಧನದ ಬೆನ್ನಲ್ಲೇ ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಬೀಡ್ ಜಿಲ್ಲೆಯಲ್ಲಿ ಸರ್ಪಂಚ್ವೊಬ್ಬರ ಭೀಕರ ಹತ್ಯೆಯಾಗಿತ್ತು. ಮಸ್ಸಾಜೋಗ್ ಗ್ರಾಮದ ಸರ್ಪಂಚ್ ಸಂತೋಷ್ ದೇಶಮುಖ್ ಅವರ ಹತ್ಯೆಯಲ್ಲಿ ಪಾತ್ರ ವಹಿಸಿದ್ದ ಆರೋಪದ ಮೇಲೆ ಸಚಿವ ಧನಂಜಯ್ ಆಪ್ತ ವಾಲ್ಮಿಕ್ ಕರಡ್ ಅವರನ್ನು ಬಂಧಿಸಲಾಗಿತ್ತು
ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗಳನ್ನು ಹೊಂದಿದ್ದ ಮುಂಡೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸೂಚನೆಯ ಮೇರೆಗೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಮುಂಡೆ ಅವರು, ಸರ್ಪಂಚ್ರ ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬುದು ತಮ್ಮ ದೃಢವಾದ ಬೇಡಿಕೆಯಾಗಿದೆ. ಈ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಅಲ್ಲದೇ, ನ್ಯಾಯಾಂಗ ತನಿಖೆಗೆ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜೀನಾಮೆ ನಿರ್ಧಾರ ಕುರಿತು ಸ್ಪಷ್ಟನೆ ನೀಡಿರುವ ಅವರು, ನನ್ನ ಆರೋಗ್ಯವೂ ಚೆನ್ನಾಗಿಲ್ಲ. ಶೀಘ್ರದಲ್ಲೇ ಚಿಕಿತ್ಸೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಹೇಳಿದ್ದಾರೆ. ‘ಮುಂಡೆ ಅವರ ರಾಜೀನಾಮೆ ಸ್ವೀಕರಿಸಿ, ರಾಜ್ಯಪಾಲರಿಗೆ ಸಲ್ಲಿಸಲಾಗುವುದು’ ಎಂದು ಸಿಎಂ ಫಡ್ನವಿಸ್ ತಿಳಿಸಿದ್ದಾರೆ.