ಒಟ್ಟಾವಾ: ಅಮೆರಿಕ ದೇಶಗಳಿಗೆ ಆಮದಾಗುವ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ, ಅಮೆರಿಕ ಜೊತೆಗಿನ ಹಳೆಯ ಆರ್ಥಿಕ ಮತ್ತು ರಕ್ಷಣಾ ಸಂಬಂಧಗಳು ಕೊನೆಗೊಂಡಿದೆ ಎಂದು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಅಮೆರಿಕದ ಸುಂಕ (US Tariff) ವಿಧಿಸುವ ಕ್ರಮವು ಕೆನಡಾದ ಆರ್ಥಿಕತೆಯ ಮೇಲಿನ ನೇರ ದಾಳಿಯಾಗಿದೆ. ಇದು ಕೆನಡಾದ 5 ಲಕ್ಷ ಆಟೋಮೊಬೈಲ್ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಭದ್ರತೆ ಮತ್ತು ವ್ಯಾಪಾರ ಸಂಬಂಧಗಳ ಮಾತುಕತೆಗೆ ಮತ್ತೆ ಸಮಯ ಬರುತ್ತದೆ ಎಂದು ಕಾರ್ನಿ ಹೇಳಿದ್ದಾರೆ.
ಟ್ರಂಪ್ ಅವರ ಸುಂಕ ವಿಧಿಸುವ ಕ್ರಮವು ಅನ್ಯಾಯದ ಕ್ರಮ. ಈ ಮೂಲಕ ಟ್ರಂಪ್ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ವ್ಯಾಪಾರ ಒಪ್ಪಂದಗಳನ್ನು ಉಲ್ಲಂಘಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್ನೊಂದಿಗಿನ ಸಂಬಂಧವನ್ನು ಶಾಶ್ವತವಾಗಿ ಬದಲಾಯಿಸುತ್ತಿದ್ದಾರೆ. ಭವಿಷ್ಯದ ವ್ಯಾಪಾರ ಸಂಬಂಧಗಳನ್ನು ಲೆಕ್ಕಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ನಮ್ಮ ಆರ್ಥಿಕತೆ, ಮಿಟರಿ ಸಹಕಾರ ಮತ್ತು ಭದ್ರತೆಯ ಆಧಾರದ ಮೇಲೆ ಅಮೆರಿಕದ ಜೊತೆಗಿನ ಹಳೆಯ ಸಂಬಂಧಗಳನ್ನು ಮುಗಿಸುತ್ತಿದ್ದೇವೆ. ಟ್ರಂಪ್ ಸುಂಕದ ವಿರುದ್ಧ ಹೋರಾಡುವುದು ಆರ್ಥಿಕತೆ ರಕ್ಷಿಸುವುದು ನಮ್ಮ ಮುಂದಿನ ಉದ್ದೇಶ. ಪ್ರತೀಕಾರದ ವ್ಯಾಪಾರ ಕ್ರಮಗಳೊಂದಿಗೆ ಹೋರಾಡುತ್ತೇವೆ, ಇದರಿಂದ ಹೆಚ್ಚು ಪರಿಣಾಮ ಬೀರುವುದು ಅಮೆರಿಕದ ಮೇಲೆಯೇ ಎಂದು ಅವರು ಹೇಳಿದ್ದಾರೆ.