ಮುಂಬೈ: ದಾದಾಸಾಹೇಬ್ ಫಾಲ್ಕೆ, ಪದ್ಮಶ್ರೀ ಪುರಸ್ಕೃತ ಬಾಲಿವುಡ್ನ ಹಿರಿಯ ನಟ, ನಿರ್ಮಾಪಕ ಮನೋಜ್ ಕುಮಾರ್ ಮುಂಬೈ ಆಸ್ಪತ್ರೆಯಲ್ಲಿ ಇಂದು (ಶುಕ್ರವಾರ) ಮುಂಜಾನೆ ನಿಧನರಾದರು. ಅವರಿಗೆ 87 ವರ್ಷವಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಳಗಿನ ಜಾವ 3.30ರ ಸುಮಾರಿಗೆ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಕುಟುಂಬದ ಸ್ನೇಹಿತ ಮತ್ತು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಪಿಟಿಐಗೆ ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಸ್ಪತ್ರೆಯ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಮನೋಜ್ ಕುಮಾರ್ ಅವರದ್ದು ಪ್ರಸಿದ್ದ ಹೆಸರು. ಶಹೀದ್, ಉಪಕಾರ್, ಪುರಬ್ ಔರ್ ಪಶ್ಚಿಮ್ ಸೇರಿದಂತೆ ದೇಶಭಕ್ತಿಯ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಅವರನ್ನು ಅಭಿಮಾನಿಗಳು ‘ಭರತ್ ಕುಮಾರ್’ ಎಂದು ಕರೆಯುತ್ತಿದ್ದರು.
ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ 1992ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ, 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು.