ಹರಿಯಾಣ: ಇಲ್ಲಿನ ಸೆಕ್ಟರ್ 27ರಲ್ಲಿ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಏಳು ಮಂದಿಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪರೀಕ್ಷಿಸಿದ ವೈದ್ಯರು, ಎಲ್ಲರೂ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಮೃತರಲ್ಲಿ ಪ್ರವೀಣ್ ಮಿತ್ತಲ್, ಅವರ ತಂದೆ ದೇಶರಾಜ್ ಮಿತ್ತಲ್, ತಾಯಿ ಮತ್ತು ಪತ್ನಿ ಹಾಗೂ ಮೂವರು ಮಕ್ಕಳು (ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ) ಸೇರಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಕುಟುಂಬ ಮೂಲತಃ ಉತ್ತರಾಖಂಡದ್ದಾಗಿದ್ದು, ಪಂಚಕುಲದ ಬಾಡಿಗೆ ಮನೆಯಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಸಾಲದ ಸುಳಿಯಲ್ಲಿ ಸಿಲುಕಿದ್ದ ಕುಟುಂಬ: ಪೊಲೀಸರು ಮತ್ತು ಕುಟುಂಬದ ಆಪ್ತರ ಪ್ರಕಾರ, ಪ್ರವೀಣ್ ಮಿತ್ತಲ್ ಅವರ ಕುಟುಂಬವು ಸಾಲದ ಸುಳಿಯಲ್ಲಿ ಸಿಲುಕಿತ್ತು. ಕೆಲವು ಸಮಯದ ಹಿಂದೆ, ಪ್ರವೀಣ್ ಮಿತ್ತಲ್ ಅವರ ಕುಟುಂಬವು ಡೆಹ್ರಾಡೂನ್ನಲ್ಲಿ ಟೂರ್ ಅಂಡ್ ಟ್ರಾವೆಲ್ಸ್ ಪ್ರಾರಂಭಿಸಿತ್ತು. ಆದರೆ, ಅವರು ಈ ವ್ಯವಹಾರದಲ್ಲಿ ಭಾರಿ ನಷ್ಟವನ್ನು ಅನುಭವಿಸಿದ್ದರು. ಇದಲ್ಲದೇ, ಎಲ್ಲ ಆದಾಯದ ಮೂಲಗಳು ಸಹ ನಿಂತುಹೋಗಿದ್ದವು. ಅವರ ಬಳಿ ಆಹಾರ ಪದಾರ್ಥಗಳ ಖರೀದಿಗೂ ಸಹ ಹಣ ಉಳಿದಿರಲಿಲ್ಲ. ಈ ಕಾರಣದಿಂದ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎನ್ನಲಾಗಿದೆ.
ವಿಷ ಸೇವಿಸಿದ ನಂತರ ಆರು ಮಂದಿ ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಕುಳಿತಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ 112ಕ್ಕೆ ಕರೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಕುಟುಂಬದವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.