ಖ್ಯಾತ ನಿರ್ದೇಶಕ ಮಣಿರತ್ನಂ ಮತ್ತು ನಟ ಕಮಲ್ ಹಾಸನ್ ಕಾಂಬಿನೇಶನ್ನ ಬಹುನಿರೀಕ್ಷಿತ ಥಗ್ ಲೈಫ್ ಚಿತ್ರ ನಿನ್ನೆ ಕರ್ನಾಟಕ ಹೊರತುಪಡಿಸಿ ಎಲ್ಲೆಡೆ ಅದ್ಧೂರಿಯಾಗಿ ತೆರೆಕಂಡಿದೆ. 1987ರಲ್ಲಿ ಬಂದ ಪ್ರಶಸ್ತಿ ವಿಜೇತ ‘ನಾಯಕನ್’ ನಂತರ ನಟ-ನಿರ್ದೇಶಕರಿಬ್ಬರೂ ಕೆಲಸ ಮಾಡಿದ ಮಹತ್ವ ಪ್ರಾಜೆಕ್ಟ್ ಇದಾಗಿದೆ.

ಆರಂಭದಿಂದಲೂ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆಯಿದ್ದರೂ, ಕಳೆದೊಂದು ವಾರದಲ್ಲಿ ಚಿತ್ರದ ಮೇಲೆ ಭಾಷಾ ವಿವಾದ ಪರಿಣಾಮ ಬೀರಿದೆ. ತಮ್ಮ ಸಿನಿಮಾ ಪ್ರಚಾರ ಸಂದರ್ಭ “ಕನ್ನಡ ತಮಿಳಿನಿಂದ ಹುಟ್ಟಿದೆ” ಎಂದು ಹೇಳಿಕೆ ನೀಡೋ ಮೂಲಕ ಕನ್ನಡಿಗರ ತೀವ್ರ ಪ್ರತಿಕ್ರಿಯೆಗಳಿಗೆ ಗುರಿಯಾದರು. ಕಮಲ್ ಕ್ಷಮೆಯಾಚಿಸಲು ನಿರಾಕರಿಸಿದ್ದು, ಚಿತ್ರದ ಬಿಡುಗಡೆಯನ್ನು ರಾಜ್ಯದಲ್ಲಿ ಮುಂದೂಡಲಾಗಿದೆ.
ಥಗ್ ಲೈಫ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದಂತೆ, ನೆಟ್ಟಿಗರು ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಲವರು ಚಿತ್ರದ ಅಭಿನಯ ಮತ್ತು ನಿರ್ದೇಶನವನ್ನು ಶ್ಲಾಘಿಸಿದರೆ, ಮತ್ತಿತರರು ನಿರಾಶೆ ವ್ಯಕ್ತಪಡಿಸಿದರು. ಒಟ್ಟಾರೆ, ಚಿತ್ರ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ಚಿತ್ರವನ್ನು ಹೊಗಳುತ್ತಾ ಎಕ್ಸ್ ಬಳಕೆದಾರರೊಬ್ಬರು “ಥಗ್ ಲೈಫ್ ಈಸ್ ಪ್ಯೂರ್. ಮಾಸ್, ಕ್ಲಾಸ್ ಮತ್ತು ರೋಮಾಂಚಕಾರಿ ಕ್ಷಣಗಳು ಹೇರಳವಾಗಿವೆ! ದಿಸ್ ಒನ್ ಹಿಟ್ಸ್ ಹಾರ್ಡ್. ಅನ್ಮಿಸ್ಸೇಬಲ್” ಎಂದು ಬರೆದುಕೊಂಡಿದ್ದಾರೆ.