ನವದೆಹಲಿ: ವಸತಿ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ; ರಾಜ್ಯ ಕಾಂಗ್ರೆಸ್ ಸರಕಾರದ ದರ್ಬಾರಿನಲ್ಲಿ ಶಾಸಕರ ಪರಿಸ್ಥಿತಿ ತಬರನ ಕಥೆಯಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿಯ ತಮ್ಮ ಅಧಿಕೃತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಶಾಸಕರು ಅನುದಾನಕ್ಕಾಗಿ, ಸರಕಾರದ ಯೋಜನೆಗಳಿಗಾಗಿ ಕಚೇರಿಗಳ ಸುತ್ತ, ಮಂತ್ರಿಮಹೋದಯರ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರಿಗೇ ಇಂಥ ದುರ್ಗತಿ ಬಂದರೆ ಇತರೆ ಪಕ್ಷಗಳ ಶಾಸಕರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.
ಹಿಂದೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬರೆದಿದ್ದ ʼತಬರನ ಕಥೆʼ ಎಂಬ ಕಥೆಯನ್ನು ಗಿರೀಶ್ ಕಾಸರವಳ್ಳಿ ಅವರು ಸಿನಿಮಾ ಮಾಡಿದ್ದರು. ವಾಚ್ ಮನ್ ಒಬ್ಬ ತನ್ನ ಪಿಂಚಣಿಗಾಗಿ ಸರಕಾರಿ ಕಚೇರಿಗಳಿಗೆ ಅಲೆ ಅಲೆದು ಬಸವಳಿಯುವ ಕಥೆ ಅದು. ಅಂಥದ್ದೇ ಪರಿಸ್ಥಿತಿ ರಾಜ್ಯದ ಶಾಸಕರಿಗೂ ಬಂದಿರುವುದು ದುರದೃಷ್ಟಕರ. ಶಾಸಕರು ಯೋಜನೆಗಳಾಗಿ ಮಂತ್ರಿಗಳು, ಎಂಜಿಯರ್ ಗಳ ಕಚೇರಿಗಳ ಸುತ್ತ ತಬರನಂತೆ ಸುತ್ತುತ್ತಿದ್ದಾರೆ. ರಾಜ್ಯದಲ್ಲಿ ಇಂಥ ದುಸ್ಥಿತಿ ಹಿಂದೆಂದೂ ಇರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.