ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿ ಮಾಡೋ ಬದಲು ಕುಳಿತಲ್ಲಿಂದಲೇ ತಮಗೆ ಬೇಕಾದ್ದನ್ನು ಬುಕ್ ಮಾಡುವವರೇ ಹೆಚ್ಚು. ಇನ್ನೂ, ತಮಗಿಷ್ಟವಾದ ಫುಡ್ಗಳನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ರೆ ಸಾಕು, ಮನೆಬಾಗಿಲಿಗೆ ಬರುತ್ತದೆ. ಆದರೆ ನೀವೇನಾದ್ರೂ ಜೆಪ್ಟೋ ಅಪ್ಲಿಕೇಶನ್ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಈ ಮಾಜಿ ಉದ್ಯೋಗಿಯ ಹೇಳುವ ವಿಚಾರದ ಬಗ್ಗೆ ನಿಮಗೆ ತಿಳಿದಿರುವುದು ಬಹಳ ಮುಖ್ಯ. ಮಾಜಿ ಉದ್ಯೋಗಿಯೊಬ್ಬರು ಈ ಅಪ್ಲಿಕೇಶನ್ ಕುರಿತಾದ ಕರಾಳ ವಿಚಾರವನ್ನು ತಿಳಿಸಿದ್ದು, ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಅಪ್ಲಿಕೇಶನ್ ವಿರುದ್ಧ ಗರಂ ಆಗಿದ್ದಾರೆ.

ಇಂದಿನ ಬ್ಯುಸಿ ಲೈಫ್ನಲ್ಲಿ ಅಡುಗೆ ಮಾಡಲು ಯಾರಿಗೆ ಸಮಯವಿದೆ ಹೇಳಿ, ಹೀಗಾಗಿ ಈ ಫುಡ್ ಆರ್ಡರ್ ಅಪ್ಲಿಕೇಶನ್ಗಳನ್ನು ಅವಲಂಬಿಸಿಕೊಂಡವರೇ ಹೆಚ್ಚು. ಇನ್ನೂ ರೆಸ್ಟೋರೆಂಟ್ಗೆ ಹೋಗುವ ಬದಲು ಆನ್ಲೈನ್ನಲ್ಲಿಯೇ ಹೆಚ್ಚಾಗಿ ಫುಡ್ ಆರ್ಡರ್ ಮಾಡ್ತಾರೆ. ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಲು ಸ್ವಿಗ್ಗಿ, ಝೊಮ್ಯಾಟೊ, ಜೆಪ್ಟೋ, ಬ್ಲಿಂಕಿಟ್ ಸೇರಿದಂತೆ ಇನ್ನಿತ್ತರ ಅಪ್ಲಿಕೇಷನ್ಗಳಿವೆ. ಆದರೆ ಇದೀಗ ಜೆಪ್ಟೋ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ತಮಗಾದ ಅನುಭವವನ್ನು ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಅಪ್ಲಿಕೇಶನ್ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಯೋಚಿಸಿ. ಆಹಾರವನ್ನು ನಿಮ್ಮ ಮನೆಗೆ ತಲುಪಿಸುವುದಕ್ಕಿಂತ, ಕೊಳೆತ ಹಾಗೂ ಅವಧಿ ಮೀರಿದ ಆಹಾರ ನಿಮ್ಮ ಕೈ ಸೇರುತ್ತದೆ ಎಂದು ಎಚ್ಚರಿಸಿದ್ದಾರೆ.
ವೈರಲ್ ಪೋಸ್ಟ್ನಲ್ಲಿ ಏನಿದೆ?
r/pune ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಮಾಜಿ ಉದ್ಯೋಗಿಯೊಬ್ಬರು ಕಂಪನಿಯ ಕಾರ್ಯನಿರ್ವಹಣೆಯ ಬಗೆಗಿನ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ಪೋಸ್ಟ್ನಲ್ಲಿ, ನಾನು ಜೆಪ್ಟೋದಲ್ಲಿ ಮೂರು ವರ್ಷ ಕೆಲಸ ಮಾಡಿದ್ದೇನೆ, ಇನ್ನು ಮೌನವಾಗಿರಲು ನನ್ನಿಂದ ಸಾಧ್ಯವಿಲ್ಲ. ನಾನು ಉದ್ಯೋಗದಲ್ಲಿದ್ದಾಗ ಒಮ್ಮೆ, ಗ್ರಾಹಕರೊಬ್ಬರು ಗ್ರೀಕ್ ಮೊಸರನ್ನು ಆರ್ಡರ್ ಮಾಡಿದ್ದರು. ನಮ್ಮ ಬಳಿ ಕೇವಲ ಮೂರು ಡಬ್ಬಿಗಳಿದ್ದವು ಅಷ್ಟೇ, ಆ ಡಬ್ಬಿಗಳು ಅವಧಿ ಮೀರಿದ್ದವು. ಆದರೂ, ನಮ್ಮ ಸ್ಟೋರ್ ಇನ್ಚಾರ್ಜ್ ಒಬ್ಬರು, ‘ಅದನ್ನೇ ಕೊಡಿ ಎಂದು ಹೇಳಿದರು. ಫುಡ್ ಆರ್ಡರ್ ಮಾಡುವ ಜನರು ಜೆಪ್ಟೋ ಸ್ವಚ್ಛವಾಗಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಇದು ನೈಮರ್ಲ್ಯದಿಂದ ದೂರ ಉಳಿದಿದೆ. ಮಳೆಗಾಲದಲ್ಲಿ ನಮ್ಮ ಪುಣೆ ಸ್ಟೋರ್ನಲ್ಲಿ ಚರಂಡಿ ನೀರಿಂದ ತುಂಬಿಹೋಗುತ್ತದೆ. ದಿನಸಿ ಸಾಮಾನುಗಳನ್ನು ಪ್ಯಾಕ್ ಮಾಡುವ ಸ್ಥಳದಲ್ಲಿಯೇ ನೀರು ಇರುತ್ತದೆ ಎಂದಿದ್ದಾರೆ.
ನಾವು ಒಂಬತ್ತು ಗಂಟೆಗಿಂತ ಹೆಚ್ಚು ಕಾಲ ಬೂಟುಗಳನ್ನು ಹಾಕದೇ ಆ ಕೊಳಕಾದ ನೀರಿನಲ್ಲಿಯೇ ನಿಂತು ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಅನೇಕರಿಗೆ ಆರೋಗ್ಯ ಸಮಸ್ಯೆ ಬಂದರೂ ಯಾರಿಗೂ ವೈದ್ಯಕೀಯ ಪರಿಹಾರವೇ ಸಿಗುವುದಿಲ್ಲ. ಇಲ್ಲಿರುವ ಹಣ್ಣುಗಳು ಮತ್ತು ತರಕಾರಿಗಳು ಕೊಳೆತು ಹಾಳಾಗಿರುತ್ತವೆ, ಆದರೂ ಅವುಗಳನ್ನು ಪ್ಯಾಕ್ ಮಾಡಿ ತಲುಪಿಸಿ ಎಂದು ಹೇಳುತ್ತಾರೆ. ಯಾವುದೇ ಹಿಂಜರಿಕೆಯಿಲ್ಲದೇನೆ ಅವಧಿ ಮೀರಿದ ಉತ್ಪನ್ನಗಳನ್ನು ಹಿಂದಕ್ಕೆ ತೆಗೆದುಕೊಳ್ಳದೆ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಹೀಗಾಗಿ ಈ ಜೆಪ್ಟೋ ನೈರ್ಮಲ್ಯತೆಗೆ ಗಮನ ಕೊಡುವುದಿಲ್ಲ. ಈ ಸತ್ಯವು ಗ್ರಾಹಕರಿಗೆ ತಿಳಿಯುವ ಹಕ್ಕಿದೆ. ಹೀಗಾಗಿ ಯಾರು ಕೂಡ ಜೆಪ್ಟೋದಿಂದ ಆಹಾರವನ್ನು ಆರ್ಡರ್ ಮಾಡಬೇಡಿ ಎಂದು ಹೇಳಿದ್ದಾರೆ.




