ಮುಂಬೈ : ಮುಂಬೈನಲ್ಲಿ 2006ರಲ್ಲಿ ಸಂಭವಿಸಿದ ಸರಣಿ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಬಾಂಬೆ ಹೈಕೋರ್ಟ್ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.

2006ರ ಜುಲೈ 11ರಂದು ಮುಂಬೈ ರೈಲುಗಳಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 188ಮಂದಿ ಬಲಿಯಾಗಿದ್ದರು. ಕಮಲ್ ಅಹ್ಮದ್ ಅನ್ಸಾರಿ (37), ತನ್ವೀರ್ ಅಹ್ಮದ್ ಅನ್ಸಾರಿ (37), ಮೊಹಮ್ಮದ್ ಫೈಸಲ್ ಶೇಕ್ (36), ಇತೇಶಂ ಸಿದ್ದಿಕಿ (30), ಮೊಹಮ್ಮದ್ ಮಾಜಿದ್ ಶಫಿ (32), ಶೇಕ್ ಅಲಾಂ ಶೇಕ್ (41), ಮೊಹಮ್ಮದ್ ಸಾಜಿದ್ ಅನ್ಸಾರಿ (34), ಮುಜಾಮಿಲ್ ಶೇಕ್ (27), ಸೋಹಿಲ್ ಮೊಹಮ್ಮದ್ ಶೇಕ್ (43), ಜಮೀರ್ ಅಹ್ಮದ್ ಶೇಕ್ (36), ನಾವೆದ್ ಹುಸೇನ್ ಖಾನ್ (30) ಮತ್ತು ಆಸಿಫ್ ಖಾನ್ (38) ಆರೋಪಿಗಳು.
ಎಟಿಎಸ್ ಚಾರ್ಜ್ಶೀಟ್ ಪ್ರಕಾರ, ರೈಲುಗಳಲ್ಲಿ ಸರಣಿ ಸ್ಫೋಟಕ್ಕೆ ಬಳಸಲಾದ ಬಾಂಬ್ಗಳನ್ನು ಮುಂಬೈ ಹೊರವಲಯದ ಗೋವಾಂಡಿ ಪ್ರದೇಶದಲ್ಲಿರುವ ಕೊಠಡಿಯೊಂದರಲ್ಲಿ ತಯಾರಿಸಲಾಗಿತ್ತು. ಈ ವೇಳೆ ಹಲವು ಪಾಕ್ ಮೂಲದ ಪ್ರಜೆಗಳು ಹಾಜರಿದ್ದರು. ಆರ್ಡಿಎಕ್ಸ್ ಮತ್ತು ಅಮೋನಿಯಂ ನೈಟ್ರೇಟ್ ಮಿಶ್ರಣವನ್ನು ಸ್ಫೋಟಕ್ಕೆ ಬಳಸಲಾಗಿತ್ತು.
ಈ ಮಿಶ್ರಣವನ್ನು 7 ಪ್ರತ್ಯೇಕ ಬ್ಯಾಗ್ಗಳಲ್ಲಿ ತುಂಬಿ, ಚರ್ಚ್ಗೇಟ್ನಿಂದ ಹೊರಟಿದ್ದ ರೈಲುಗಳಲ್ಲಿ ಇರಿಸಲಾಗಿತ್ತು. ಖಾರ್ರಸ್ತೆ-ಸಾಂತಾಕ್ರೂಜ್, ಬಾಂದ್ರಾ-ಖಾರ್ ರಸ್ತೆ, ಜೋಗೇಶ್ವರಿ-ಮಾಹಿಮ್ ಜಂಕ್ಷನ್, ಮೀರಾ ರಸ್ತೆ-ಭಯೇಂದರ್, ಮಾತುಂಗ-ಮಾಹಿಮ್ ಜಂಕ್ಷನ್ ಮಾರ್ಗಗಳ ಮಧ್ಯೆ ರೈಲುಗಳಲ್ಲಿ ಸ್ಫೋಟ ಸಂಭವಿಸಿತ್ತು.