ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ನಿನ್ನೆ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ಸಿನಿಮಾ ಮೊದಲ ದಿನ ಉತ್ತಮ ಗಳಿಕೆಯನ್ನೇ ಮಾಡಿದೆ. ವರ್ಷಗಳ ಬಳಿಕ ಪವನ್ ಕಲ್ಯಾಣ್ ತೆರೆಯ ಮೇಲೆ ಕಾಣಿಸಿಕೊಂಡಿರುವ ಕಾರಣ ಸಹಜವಾಗಿಯೇ ಅಭಿಮಾನಿಗಳು ಸಂಭ್ರಮದಿಂದ ಸಿನಿಮಾ ಅನ್ನು ಬರಮಾಡಿಕೊಂಡಿದ್ದಾರೆ. ಪವನ್ ಅವರ ರಾಜಕೀಯ ಪಕ್ಷದ ಧ್ವಜ ಹಿಡಿದು, ಕೆಂಪು ಟವೆಲ್ ಹೆಗಲ ಮೇಲೆ ಹಾಕಿಕೊಂಡು ಹೀಗೆ ನಾನಾ ವಿಧವಾಗಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದಿದ್ದಾರೆ.

ಆದರೆ ಕೆಲವು ಮಹಿಳೆಯರು ಮುಖಕ್ಕೆ ಪರದೆ ಹಾಕಿಕೊಂಡು ಬಂದು ಮೊದಲ ದಿನ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ವೀಕ್ಷಿಸಿದ್ದಾರೆ. ಕೆಂಪು ಬಣ್ಣದ ಪರದೆಗಳನ್ನು ಮುಖಕ್ಕೆ ಹಾಕಿಕೊಂಡು ಒಟ್ಟಿಗೆ ಚಿತ್ರಮಂದಿರಕ್ಕೆ ಬಂದು, ಇಡೀ ಸಿನಿಮಾ ಅನ್ನು ಪರದೆ ಧರಿಸಿಯೇ ಸಿನಿಮಾ ನೋಡಿದ್ದಾರೆ ಮಹಿಳೆಯರು. ಹೀಗೆ ಮಹಿಳೆಯರು ಪರದೆ ಹಾಕಿಕೊಂಡು ಸಿನಿಮಾ ನೋಡಿರುವ ಚಿತ್ರ, ವಿಡಿಯೋ ವೈರಲ್ ಆಗಿದ್ದು, ಮಹಿಳೆಯರು ಹೀಗೇಕೆ ಮಾಡಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ.
ಮಹಿಳೆಯರು ಪ್ರತಿಭಟನೆಯ ಕಾರಣಕ್ಕೆ ಹೀಗೆ ಮಾಡಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಆದರೆ ಹಾಗೇನೂ ಇಲ್ಲ. ಸಿನಿಮಾ ಒಂದರ ಪ್ರಚಾರಕ್ಕಾಗಿ ಚಿತ್ರತಂಡವೇ ಹೀಗೆ ಪರದೆ ಹಾಕಿಕೊಂಡು ಬಂದು ‘ಹರಿ ಹರ ವೀರ ಮಲ್ಲು’ ಸಿನಿಮಾ ನೋಡಿದ್ದಾರೆ. ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ‘ಪರದ’ ಹೆಸರಿನ ತೆಲುಗು ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾದ ಪ್ರಚಾರಕ್ಕಾಗಿ ಈಗ ಕೆಲ ಮಹಿಳೆಯರು ಪರದೆ ಧರಿಸಿ ‘ಹರಿ ಹರ ವೀರ ಮಲ್ಲು’ ಸಿನಿಮಾ ವೀಕ್ಷಿಸಿದ್ದಾರೆ.