ಜಮ್ಮು ಕಾಶ್ಮೀರ: ಕಾಶ್ಮೀರದ ಡಚಿಗಮ್ ಅರಣ್ಯದಲ್ಲಿ ಪಹಲ್ಗಾಮ್ ಹತ್ಯಾಕಾಂಡ ನಡೆಸಿದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಕೆಲ ದಿನಗಳಲ್ಲೇ, ಶಂಕಿತ ಭಯೋತ್ಪಾದಕರು ಕೇಂದ್ರಾಡಳಿತ ಪ್ರದೇಶದ ಪೂಂಚ್ ಜಿಲ್ಲೆಯ ಗಡಿಯಾಚೆಯಿಂದ ಭಾರತಕ್ಕೆ ನುಸುಳಲು ಯತ್ನಿಸಿದ್ದಾರೆ. ಈ ವೇಳೆ ಸೇನಾ ಪಡೆಗಳು ನುಸುಳುಕೋರರಿಗೆ ಪ್ರತಿರೋಧವೊಡ್ಡಿದ್ದು, ಪರಸ್ಪರ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ವಿವರಿಸಿರುವ ರಕ್ಷಣಾ ವಕ್ತಾರರು, ಎಲ್ಒಸಿ ಬಳಿ ಶಂಕಿತರ ಚಲನೆ ಕಂಡುಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮಂಗಳವಾರ ತಡರಾತ್ರಿ ದೇಗ್ವಾರ್ ಸೆಕ್ಟರ್ನ ಮಾಲ್ಡಿವಾಲನ್ ಪ್ರದೇಶದಲ್ಲಿ ಭಯೋತ್ಪಾದಕರು ನುಸುಳುತ್ತಿರುವ ಬಗ್ಗೆ ಸೇನಾ ಪಡೆಗಳು ಗಮನಿಸಿದವು. ಬಳಿ ಪರಸ್ಪರ ಗುಂಡಿನ ದಾಳಿಯೊಂದಿಗೆ ಎನ್ಕೌಂಟರ್ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಚಕಮಕಿಯ ವೇಳೆ ಇಬ್ಬರು ಭಯೋತ್ಪಾದಕರು ಕೆಳಗೆ ಬಿದ್ದಿದ್ದಾರೆ. ಆದರೆ ಅವರು ಅಸುನೀಗಿದ್ದಾದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಪಿಟಿಐ ವರದಿ ಮಾಡಿದೆ
“ಪೂಂಚ್ ಸೆಕ್ಟರ್ನ ಜನರಲ್ ಪ್ರದೇಶದಲ್ಲಿ ಗಡಿಯ ಉದ್ದಕ್ಕೂ ಇಬ್ಬರು ಶಂಕಿತರ ಚಲನೆಯನ್ನು ಸೇನಾ ಪಡೆಗಳು ಗಮನಿಸಿವೆ. ಗುಂಡಿನ ಚಕಮಕಿ ನಡೆಯಿತು. ಸದ್ಯ ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದು ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.