ಆಸ್ಟ್ರೇಲಿಯಾ ವಿರುದ್ಧ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ಒಂದೇ ಒಂದು ಮ್ಯಾಚ್ ಗೆದ್ದಿಲ್ಲ. ತವರಿನಲ್ಲಿ ನಡೆದ ಈ ಸರಣಿಯನ್ನು 5-0 ಅಂತರದಿಂದ ಸೋಲುವ ಮೂಲಕ ವಿಂಡೀಸ್ ಪಡೆ ಭಾರೀ ಮುಖಭಂಗ ಅನುಭವಿಸಿದೆ. ಅತ್ತ ಅಮೋಘ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದೆ.
ಟಿ20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ದಾಖಲೆ ನಿರ್ಮಿಸಿದೆ. ಅದು ಕೂಡ ಟೀಮ್ ಇಂಡಿಯಾದ ವಿಶ್ವ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ. ಅಂದರೆ ಟಿ20 ಇತಿಹಾಸದಲ್ಲಿ 5 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭರ್ಜರಿ ದಾಖಲೆಯೊಂದು ಭಾರತ ತಂಡದ ಹೆಸರಿನಲ್ಲಿತ್ತು.
2020 ರಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ತಂಡ 5-0 ಅಂತರದಿಂದ ಗೆದ್ದುಕೊಂಡಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 5-0 ಅಂತರದಿಂದ ಸರಣಿ ಗೆದ್ದ ವಿಶ್ವದ ಮೊದಲ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿತ್ತು. ಇದಾದ ಬಳಿಕ ಯಾವುದೇ ತಂಡಕ್ಕೂ 5 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಸಾದ್ಯವಾಗಿರಲಿಲ್ಲ.
ಆದರೆ ಈ ಬಾರಿ ಹೊಸ ಇತಿಹಾಸ ಬರೆಯುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಆಸೀಸ್ ಪಡೆ 5-0 ಅಂತರದಿಂದ ಗೆದ್ದುಕೊಂಡಿದ್ದಾರೆ. ಈ ಮೂಲಕ 5 ವರ್ಷಗಳ ಹಿಂದೆ ಭಾರತ ತಂಡ ಬರೆದಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದ್ದಾರೆ.
ಅಷ್ಟೇ ಅಲ್ಲದೆ ವೆಸ್ಟ್ ಇಂಡೀಸ್ ತಂಡವನ್ನು ಟಿ20 ಸರಣಿಯಲ್ಲಿ 5-0 ಅಂತರದಿಂದ ಸೋಲಿಸಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಕೂಡ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ. ಕಳೆದ 20 ವರ್ಷಗಳಲ್ಲಿ ವೆಸ್ಟ್ ಇಂಡೀಸ್ 7 ಬಾರಿ 5 ಪಂದ್ಯಗಳ ಟಿ20 ಸರಣಿ ಆಡಿದೆ. ಈ ವೇಳೆ ಒಮ್ಮೆಯೂ ಐದು ಮ್ಯಾಚ್ಗಳಲ್ಲೂ ಪರಾಜಯಗೊಂಡಿರಲಿಲ್ಲ.
ಆದರೆ ಬಾರಿ ವಿಂಡೀಸ್ ಪಡೆಯನ್ನು ಮಕಾಡೆ ಮಲಗಿಸಿ ಆಸ್ಟ್ರೇಲಿಯಾ ತಂಡ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 5-0 ಅಂತರದಿಂದ ಸರಣಿ ಗೆದ್ದ ವಿಶ್ವದ 2ನೇ ತಂಡವೆಂಬ ಹೆಗ್ಗಳಿಕೆಯನ್ನು ಆಸ್ಟ್ರೇಲಿಯಾ ತಂಡ ತನ್ನದಾಗಿಸಿಕೊಂಡಿದೆ. ಈ ದಾಖಲೆಯೊಂದಿಗೆ ಇದೀಗ ಆಸ್ಟ್ರೇಲಿಯಾ ತಂಡ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದೆ.