Solar Energy Generation || ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ.

Solar energy Generation

ಭಾರತವು ಜಪಾನ್ ಅನ್ನು ಹಿಂದಿಕ್ಕಿ ಸೌರಶಕ್ತಿ ಉತ್ಪಾದನೆಯಲ್ಲಿ ಮೂರನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಈ ಮಾಹಿತಿಯನ್ನು ನೀಡಿದರು.

ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ಯ ಡೇಟಾವನ್ನು ಉಲ್ಲೇಖಿಸಿ ಕೇಂದ್ರ ಸಚಿವರು, ಭಾರತವು 1,08,494 ಗಿಗಾವ್ಯಾಟ್ ಗಂಟೆಗಳ ಸೌರಶಕ್ತಿಯನ್ನು ಉತ್ಪಾದಿಸಿದ್ರೆ, ಜಪಾನ್ 96,459 ಗಿಗಾವ್ಯಾಟ್ ಗಂಟೆಗಳ ಸೌರಶಕ್ತಿಯನ್ನು ಉತ್ಪಾದಿಸಿದೆ. ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವು ಜಪಾನ್​ಗಿಂತ ಒಂದು ಹೆಜ್ಜೆ ಮುಂದಿದೆ ಎಂದು ಹೇಳಿದರು.

IRENA ಇಂಧನ ಪರಿವರ್ತನೆಗಾಗಿ ಜಾಗತಿಕ ಸಂಸ್ಥೆಯಾಗಿದ್ದು, ಇದು ಅಂತರರಾಷ್ಟ್ರೀಯ ಸಹಕಾರಕ್ಕಾಗಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಶಗಳಿಗೆ ಅವುಗಳ ಇಂಧನ ಪ್ರಕ್ರಿಯೆಯ ರೂಪಾಂತರದಲ್ಲಿ ಸಹಾಯ ಮಾಡುತ್ತದೆ. ಇದರ ಹೊರತಾಗಿ ಇದು ತಂತ್ರಜ್ಞಾನ, ನಾವೀನ್ಯತೆ, ನೀತಿ, ಹಣಕಾಸು ಮತ್ತು ಹೂಡಿಕೆಯ ದತ್ತಾಂಶದೊಂದಿಗೆ ವಿಶ್ಲೇಷಣೆಯನ್ನು ಸಹ ಒದಗಿಸುತ್ತದೆ.

ಕೇಂದ್ರ ಸಚಿವ ಜೋಶಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್​ನಲ್ಲಿ ಬರೆದಿರುವ ಪ್ರಕಾರ, ಭಾರತವು ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್ ಅನ್ನು ಹಿಂದಿಕ್ಕಿದೆ. ಭಾರತವು 1,08,494 GWh ಸೌರಶಕ್ತಿಯನ್ನು ಉತ್ಪಾದಿಸಿದೆ. ಆದರೆ ಜಪಾನ್‌ನ ಉತ್ಪಾದನೆ 96,459 GWh ಆಗಿದೆ. ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಜಾಗತಿಕ ಶುದ್ಧ ಇಂಧನ ಕ್ರಾಂತಿಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು.

2030ರ ವೇಳೆಗೆ 500 GW ಶುದ್ಧ ಇಂಧನ ಆಧಾರಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಭಾರತ ಹೊಂದಿದೆ. ಇದನ್ನು ಸಾಧಿಸಲು ಅದು ಬಹು ಆಯಾಮದ ವಿಧಾನದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಈ ಸಾಧನೆ ಮುಖ್ಯವಾಗಿದೆ.

ಸೌರಶಕ್ತಿ ಕ್ಷೇತ್ರದಲ್ಲಿನ ಯಶಸ್ಸಿನ ಜೊತೆಗೆ ಭಾರತವು ತನ್ನ ಪವನ ಶಕ್ತಿ ಬಂಡವಾಳವನ್ನು ವಿಸ್ತರಿಸುತ್ತಿದೆ. ಕಳೆದ ತಿಂಗಳ ಆರಂಭದಲ್ಲಿ ಈ ವರ್ಷದ ಜೂನ್ 30ರ ವೇಳೆಗೆ ಭಾರತದಲ್ಲಿ ಸ್ಥಾಪಿತ ಪವನ ಶಕ್ತಿ ಸಾಮರ್ಥ್ಯವು 51.67 GW ತಲುಪಿದೆ ಎಂದು ಕೇಂದ್ರ ಸಚಿವರು ಸಂಸತ್ತಿಗೆ ತಿಳಿಸಿದ್ದರು.

Leave a Reply

Your email address will not be published. Required fields are marked *