ಸ್ಯಾಂಡಲ್ವುಡ್ ನಟಿ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ಸ್ ಮಾಡಿದ್ದ ಕಿರಾತಕರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರವಾಗಿ ಧ್ವನಿ ಎತ್ತಿದ್ದ ರಮ್ಯಾ ಅವರು ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಪೋಸ್ಟ್ ಹಂಚಿಕೊಂಡಿದ್ದರು. ಇದಾದ ಬಳಿಕ ನಟ ದರ್ಶನ್ ಅಭಿಮಾನಿಗಳು ರಮ್ಯಾ ಅವರಿಗೆ ಕೆಟ್ಟ ಪದಗಳನ್ನು ಬಳಸಿ ಕಾಮೆಂಟ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಸ್ಕ್ರೀನ್ಶಾಟ್ಗಳನ್ನು ರಮ್ಯಾ ಮತ್ತೆ ಶೇರ್ ಮಾಡಿದ್ದಲ್ಲದೆ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಖುದ್ದಾಗಿ ದೂರು ನೀಡಿದ್ದರು.
ದೂರು ದಾಖಲಾದ ಬೆನ್ನಲ್ಲೇ ರಮ್ಯಾ ಅವರಿಗೆ ಕೆಟ್ಟ ಕಾಮೆಂಟ್ ಮಾಡಿದ್ದ ಸೋಷಿಯಲ್ ಮೀಡಿಯಾ ಖಾತೆಗಳ ಜಾಡು ಹಿಡಿದಿದ್ದ ಪೊಲೀಸರು ಈ ಪೈಕಿ ಕೆಲವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಮಂದಿ ಕೆಟ್ಟ ಕಾಮೆಂಟ್ಸ್ ಮಾಡಿದ್ದು, ಅದರಲ್ಲಿ ಅತಿ ಕೆಟ್ಟದಾಗಿ ಕಾಮೆಂಟ್ ಹಾಕಿದ್ದವರ ಸ್ಕ್ರೀನ್ಶಾಟ್ಗಳನ್ನು ರಮ್ಯಾ ಹಂಚಿಕೊಂಡಿದ್ದರು. ದೂರಿನೊಂದಿಗೆ ರಮ್ಯಾ ಅವರು ಕೆಟ್ಟ ಕಾಮೆಂಟ್ಸ್ ಮಾಡಿದ್ದವರ ಮಾಹಿತಿ ನೀಡಿದ್ದರು. ದೂರು ಆಧರಿಸಿ ಸಿಸಿಬಿ ಸೈಬರ್ ಪೊಲೀಸರು ಸದ್ಯ ಹಲವರನ್ನು ಅರೆಸ್ಟ್ ಮಾಡಿದ್ದು, ಉಳಿದವರಿಗೆ ಢವಢವ ಶುರುವಾಗಿದೆ.
ಐಪಿ ಅಡ್ರೆಸ್ ಪತ್ತೆ ಹಚ್ಚಿ ಬಲೆ ಬಳ್ಳಾರಿ, ಕೋಲಾರ, ಚಿತ್ರದುರ್ಗ ಮೂಲದವರನ್ನು ಅರೆಸ್ಟ್ ಮಾಡಿರುವುದಾಗಿ ವರದಿಯಾಗಿದೆ. ಈ ಮೂವರು ಕೂಡ ನಟಿ ರಮ್ಯಾ ಅವರಿಗೆ ಅಶ್ಲೀಲ ಕಾಮೆಂಟ್ ಹಾಕಿದ್ದರು. ದೂರು ಆಧರಿಸಿ ಸೋಷಿಯಲ್ ಮೀಡಿಯಾ ಬಳಕೆದಾರರ ಐಪಿ ಅಡ್ರೆಸ್ ಆಧರಿಸಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರ ಮೇಲೆ ಆರೋಪವಿದ್ದು, ಎಲ್ಲರಿಗೆ ಬಿಸಿ ಮುಟ್ಟಿಸುವ ಕೆಲಸ ಶುರುವಾಗಿದೆ. ರಮ್ಯಾ ದೂರು ದಾಖಲಿಸುವ ವೇಳೆ 43 ಅಕೌಂಟ್ಗಳ ಹೆಸರು ಉಲ್ಲೇಖಿಸಿದ್ದರು. ಮತ್ತೆ ಐದು ಅಕೌಂಟ್ಗಳನ್ನು ಸೇರಿ 48 ಖಾತೆಗಳ ಮೇಲೆ ದೂರು ದಾಖಲಾಗಿತ್ತು. ಎಫ್ಐಆರ್ ದಾಖಲಾದ ಸುದ್ದಿ ತಿಳಿದ ತಕ್ಷಣ ಹಲವು ಖಾತೆಗಳು ಡಿಲೀಟ್ ಆಗಿದ್ದವು. ಆದರೆ ಪೊಲೀಸರು ಈ ಎಲ್ಲರ ಐಪಿ ಅಡ್ರೆಸ್ಗಳ ಮಾಹಿತಿ ಕಲೆಹಾಕಿ ಬಂಧಿಸುವ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ಕಾಮೆಂಟ್ಗಳಲ್ಲಿ ದರ್ಶನ್ ಪರ ಮಾತನಾಡಿದ್ದರು, ಡಿಬಾಸ್ ಡಿಬಾಸ್ ಎಂದು ಉಲ್ಲೇಖಿಸಿದ್ದರಿಂದ ಎಲ್ಲರೂ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಲಾಗಿದೆ.
ನಟಿ ರಮ್ಯಾ ಅವರು ನ್ಯಾಯದ ಪರ ಧ್ವನಿ ಎತ್ತಿದ್ದಕ್ಕೆ ದರ್ಶನ್ ಅಭಿಮಾನಿಗಳು ನಟಿಯ ವಿರುದ್ಧ ಕೆರಳಿ ಕೆಂಡವಾಗಿದ್ದರು. ಆದರೆ ನಟಿಯನ್ನು ವೈಯಕ್ತಿಕವಾಗಿ ನಿಂದಿಸುವುದು ಶುರುವಾಗಿತ್ತು. ಆರಂಭದಲ್ಲಿ ಇದನ್ನು ರಮ್ಯಾ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದರು. ಇದರಿಂದ ಮನನೊಂದು ರಮ್ಯಾ ದೂರು ನೀಡಿದ್ದರು. ಅಲ್ಲದೆ ನಟ ದರ್ಶನ್ ಅವರು ಇಂತಹ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕಿತ್ತು ಎಂದಿದ್ದಾರೆ.
ನಟಿ Ramyaಗೆ ಅಶ್ಲೀಲ ಕಾಮೆಂಟ್ ಮಾಡಿದವರು ಅರೆಸ್ಟ್! ಶುರುವಾಯ್ತು ಮಾರಿಹಬ್ಬ.
