ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಗಜ ಪಯಣಕ್ಕೆ ಬರುವ ಆನೆಗಳಿಗೆ ರಾಜಾತಿಥ್ಯ ನೀಡಲು ಅರಮನೆಯಲ್ಲಿ ಭರ್ಜರಿ ಸಿದ್ಧತೆ ಆರಂಭಿಸಲಾಗಿದೆ. ಆಗಸ್ಟ್ 4ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಗಜ ಪಯಣ ಆರಂಭವಾಗಲಿದ್ದು, ಮೈಸೂರು ಅರಮನೆಗೆ ದಸರಾ ಆನೆಗಳು ಆಗಮಿಸಲಿವೆ. ಆನೆಗಳ ವಾಸದ ಸ್ಥಳ, ಮಾವುತರು, ಕಾವಾಡಿಗಳಿಗೆ ಮನೆ ನಿರ್ಮಾಣ ಚಟುವಟಿಕೆ ಭರದಿಂದ ಸಾಗಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸಲಿವೆ.
ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ದುಬಾರೆ ಶಿಬಿರದ ಕಂಜನ್, ಧನಂಜಯ, ಪ್ರಶಾಂತ, ಬಳ್ಳೆ ಶಿಬಿರದ ಮಹೇಂದ್ರ, ದೊಡ್ಡಹರವೆ ಶಿಬಿರದ ಏಕಲವ್ಯ, ದುಬಾರೆ ಶಿಬಿರದ ಕಾವೇರಿ, ಲಕ್ಷ್ಮೀ ಆನೆ ಮೊದಲ ಹಂತದಲ್ಲಿ ಆಗಮಿಸಲಿವೆ.