Prajwal Revannaಗೆ ಬಿಗ್ಶಾಕ್; ಜೀವಾವಧಿಶಿಕ್ಷೆಪ್ರಕಟಿಸಿದಕೋರ್ಟ್..!

Prajwal Revannaಗೆ ಬಿಗ್ಶಾಕ್; ಜೀವಾವಧಿಶಿಕ್ಷೆಪ್ರಕಟಿಸಿದಕೋರ್ಟ್..!

ಬೆಂಗಳೂರು: ಕೆಆರ್ ನಗರ ಮೂಲದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆ ನಂತರ ಆಕೆಯನ್ನು ಅಪಹರಿಸಿದ್ದ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ದೋಷಿ ಎಂಬುದು ಸಾಬೀತಾಗಿದ್ದು, ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ನೀಡಿದ್ದಾರೆ.

ಕೇವಲ 4 ತಿಂಗಳ ದಾಖಲೆ ಸಮಯದಲ್ಲೇ ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದ್ದಾರೆ. ಇದರೊಂದಿಗೆ, ಮೂರು ಅತ್ಯಾಚಾರ ಪ್ರಕರಣ, 1 ಲೈಂಗಿಕ ದೌರ್ಜನ್ಯ ಹೀಗೆ ಒಟ್ಟು 4 ಪ್ರಕರಣಗಳ ಪೈಕಿ ಒಂದರಲ್ಲಿ ತೀರ್ಪು ಹೊರಬಿದ್ದಂತಾಗಿದೆ. ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ಪ್ರಜ್ವಲ್ ದೋಷಿ ಎಂದು ಶುಕ್ರವಾರ ತೀರ್ಪು ನೀಡಿದ್ದ ಕೋರ್ಟ್, ಶಿಕ್ಷೆ ಪ್ರಮಾಣದ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತ್ತು. ಇಂದು ಬೆಳಗ್ಗೆ ನಡೆದ ವಾದ-ಪ್ರತಿವಾದ ಆಲಿಸಿದ ಜಡ್ಜ್ ಸಂತೋಷ್ ಗಜಾನನ ಭಟ್ ಅಂತಿಮವಾಗಿ ಇದೀಗ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿ ನಡೆದಿತ್ತು ಬಿರುಸಿನ ವಾದ-ಪ್ರತಿವಾದ

ಇದಕ್ಕೂ ಮುನ್ನ ಪ್ರಾಸಿಕ್ಯೂಷನ್ ಪರ ವಕೀಲರಾದ ಬಿಎನ್‌ ಜಗದೀಶ್‌, ಎಸ್​​ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ ಪ್ರಜ್ವಲ್​​ಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದಾದ ನಂತರ ವಾದ ಮಂಡನೆ ಮಾಡಿದ್ದ ಪ್ರಜ್ವಲ್ ಪರ ವಕೀಲೆ ನಳಿನಿ ಮಾಯೇಗೌಡ, ಶಿಕ್ಷೆ ನೀಡುವ ವೇಳೆ ಅಪರಾಧಿಯ ರಾಜಕೀಯ ಭವಿಷ್ಯ, ವಯಸ್ಸು ಇತ್ಯಾದಿಗಳನ್ನೆಲ್ಲ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು.

ನಂತರ ಪ್ರಜ್ವಲ್ ಅಭಿಪ್ರಾಯವನ್ನು ನ್ಯಾಯಾಲಯ ಕೋರಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಪ್ರಜ್ವಲ್, ಸಂಸದನಾಗಿದ್ದಾಗ ಯಾರೂ ಆರೋಪ ಮಾಡಿರಲಿಲ್ಲ. ಆಗ ಏಕೆ ಆರೋಪಿಸಿರಲಿಲ್ಲ? ಚುನಾವಣೆ ಸಮಯದಲ್ಲಿಯೇ ಯಾಕೆ ಹಾಗೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದರಲ್ಲದೆ, ನ್ಯಾಯಾಲಯ ಏನೇ ತೀರ್ಮಾನ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದರು.

ಕೆಆರ್​ ನಗರದ ಮಹಿಳೆಯ ಮೇಲಿನ ಅತ್ಯಾಚಾರ, ಅಪಹರಣ ಪ್ರಕರಣದ ಸಂಕ್ಷಿಪ್ತ ಹಿನ್ನೆಲೆ

ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ 2024ರ ಲೋಕಸಭೆ ಚುನಾವಣೆ ಸಂದರ್ಭ ಸರಣಿ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ಇದರಲ್ಲಿ ಮೈಸೂರಿನ ಕೆಆರ್ ನಗರದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪವೂ ಒಂದಾಗಿದೆ. ಅತ್ಯಾಚಾರ ಪ್ರಕರಣ ಬೆಳಕಿಗೆ ಬರಬಾರದು ಎಂದು ಮಹಿಳೆಯನ್ನು ಅಪಹರಿಸಿ ಹುಣಸೂರು ಬಳಿಯ ತೋಟದ ಮನೆಯಲ್ಲಿ ಕೂಡಿಹಾಕಲಾಗಿತ್ತು ಎಂಬ ಆರೋಪದ ಅಡಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಸೇರಿದಂತೆ ಒಟ್ಟು 9 ಆರೋಪಿಗಳಿದ್ದಾರೆ. ಹೆಚ್​ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅವರು ದೋಷಿ ಎಂದು ಸಾಬೀತಾಗಿದ್ದು, ಶಿಕ್ಷೆಯಾಗಿದೆ.

ಒಟ್ಟಾರೆಯಾಗಿ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವೆಸಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿರುವ ಆರೋಪ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳು ಇನ್ನೂ ವಿಚಾರಣಾ ಹಂತದಲ್ಲಿ ಇವೆ. ಅವುಗಳ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ.

Leave a Reply

Your email address will not be published. Required fields are marked *