ರಾಜಮನೆತನದ ಬಗ್ಗೆ ಸಿಎಂಗೆ, ಸಚಿವರಿಗೆ ಅಸಡ್ಡೆ: KRS  ಕುರಿತ Mahadevappa ಹೇಳಿಕೆಗೆ BJP ಕಿಡಿ..!

ರಾಜಮನೆತನದ ಬಗ್ಗೆ ಸಿಎಂಗೆ, ಸಚಿವರಿಗೆ ಅಸಡ್ಡೆ: KRS ಕುರಿತ Mahadevappa ಹೇಳಿಕೆಗೆ BJP ಕಿಡಿ.

ಬೆಂಗಳೂರು: ಕೆಆರ್​ಎಸ್ ಡ್ಯಾಂಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಚಿವ ಡಾ. ಹೆಚ್​ಸಿ ಮಹದೇವಪ್ಪ ಹೇಳಿಕೆಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮೊದಲಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಮನೆತನದ ಬಗ್ಗೆ ಅಸಡ್ಡೆಯಿಂದ ನಡೆದುಕೊಂಡಿದ್ದಾರೆ, ಮೊನ್ನೆಯಷ್ಟೇ ನಾಲ್ವಡಿ ಅವರಿಗಿಂತಲೂ ತಮ್ಮ ತಂದೆಯೇ ಮಿಗಿಲು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಹೇಳಿಕೊಂಡಿದ್ದರು. ಇದೀಗ ಮುಖ್ಯಮಂತ್ರಿಗಳ ಹಿಂಬಾಲಕ ಸಚಿವ ಹೆಚ್. ಸಿ. ಮಹದೇವಪ್ಪ ಅವರು ಕನ್ನಂಬಾಡಿ ಕಟ್ಟೆಗೆ ಮೊದಲು ಅಡಿಪಾಯ ಹಾಕಿದ್ದು ಟಿಪ್ಪು ಎಂದು ಹೇಳುವ ಮೂಲಕ ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ)ನಿರ್ಮಾಣದ ಹಿಂದಿನ ತ್ಯಾಗ- ಪರಶ್ರಮದ ಇತಿಹಾಸ ಹಾಗೂ ನಾಲ್ವಡಿಯವರ ಕೊಡುಗೆಯನ್ನು ಅಪಮಾನಿಸಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

‘ಕನ್ನಂಬಾಡಿ ಕಟ್ಟೆಗೆ (ಕೃಷ್ಣರಾಜ ಸಾಗರ) ರೋಚಕ ಇತಿಹಾಸವಿದೆ, ತ್ಯಾಗ ಮೆರೆದ ಹೆಗ್ಗಳಿಕೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸು ಹಾಗೂ ಪರಿಶ್ರಮದ ಫಲವೇ ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ) ನಿರ್ಮಾಣವಾಯಿತು ಎಂಬುದಕ್ಕೆ ಐತಿಹಾಸಿಕ ದಾಖಲೆಗಳಿವೆ, ತ್ಯಾಗ, ಕೊಡುಗೆಗಳ ಹೆಗ್ಗಳಿಕೆಯಿದೆ. 1908 ರಲ್ಲಿ ರೂಪಿಸಲಾದ ಯೋಜನೆಯನ್ನು ಮತ್ತಷ್ಟು ಪರಿವರ್ತಿಸಿ ಹತ್ತು ಹಲವು ಅಡ್ಡಿ ಆತಂಕ ತೊಂದರೆ ಅವಮಾನಗಳ ನಡುವೆ ಬ್ರಿಟಿಷ್ ಆಡಳಿತದಿಂದ ಅನುಮತಿ ಪಡೆದುಕೊಂಡ ಹಿನ್ನೆಲೆಯ ಪ್ರತಿ ಹೆಜ್ಜೆಗಳಿಗೂ ಪುಟ ಪುಟಗಳ ದಾಖಲೆಗಳು ಇಂದಿಗೂ ಜೀವಂತವಾಗಿವೆ’ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

1911 ರಿಂದ ಅಧಿಕೃತವಾಗಿ ಆರಂಭವಾದ ಯೋಜನೆ 1932ರಲ್ಲಿ ಪೂರ್ಣಗೊಂಡಿದ್ದಕ್ಕೆ ಎಷ್ಟು ವೆಚ್ಚವಾಯಿತು, ಯೋಜನೆ ಪೂರ್ಣಗೊಳ್ಳಲು ಆರ್ಥಿಕ ಸಂಕಷ್ಟ ಎದುರಾದಾಗ ನಾಲ್ವಡಿ ಅವರ ಮಾತೆ ವಾಣಿವಿಲಾಸ ಸನ್ನಿಧಾನ (ಕೆಂಪರಾಜಮ್ಮಣ್ಣಿ) ಹಾಗೂ ಅವರ ಪತ್ನಿ ಕೃಷ್ಣ ವಿಲಾಸ ಸನ್ನಿಧಾನ ಅವರು ಲಕ್ಷಾಂತರ ಜನರಿಗೆ ಅನ್ನ ನೀಡುವ ಯೋಜನೆ ಪೂರ್ಣಗೊಳ್ಳುವುದಕ್ಕಿಂತ ಖಜಾನೆಯಲ್ಲಿರುವ ವಜ್ರ, ವೈಢೂರ್ಯಗಳು ಹೆಚ್ಚಿನದ್ದಲ್ಲ ಎಂಬ ತ್ಯಾಗ ಮನೋಭಾವ ಪ್ರದರ್ಶಿಸಿ ತಮ್ಮ ಸ್ವಂತ ಒಡವೆಗಳನ್ನು ಮಾರಾಟ ಮಾಡಿ ಕನ್ನಂಬಾಡಿ ಕಟ್ಟೆ ಕಟ್ಟಿಸಿದ್ದಕ್ಕೆ ಐತಿಹಾಸಿಕ ತ್ಯಾಗ ಮೆರೆದ ಆನಂದ ಭಾಷ್ಪತರಿಸುವ ಕಥೆ ಮೈಸೂರು ಸಂಸ್ಥಾನದ ಪ್ರತಿ ಮನೆ,ಮನೆಯಲ್ಲೂ ಇಂದಿಗೂ ನಿತ್ಯ ನೆನಪಿನ ಸ್ಮರಣೆಯಾಗಿ ಉಳಿದಿದೆ. ಅಣೆಕಟ್ಟೆ ನಿರ್ಮಾಣಕ್ಕಾಗಿ ಸರ್.ಎಂ ವಿಶ್ವೇಶ್ವರಯ್ಯನವರ ವಿಶೇಷ ಕಾಳಜಿ ಹಾಗೂ ಪರಿಶ್ರಮ ಸೇರಿದಂತೆ ನೂರಾರು ಮಹನೀಯರ ಪರಿಶ್ರಮದ ಬೆವರಿನ ಕಥೆಯಿದೆ. ಅಂತಹ ಚಾರಿತ್ರಿಕ ಅಣೆಕಟ್ಟೆ ನಿರ್ಮಾಣವೂ ಸೇರಿದಂತೆ ನೂರಾರು ಜನಕಲ್ಯಾಣ ಕೈಗೊಂಡ ಕಾರಣಕ್ಕಾಗಿ ಮಹಾತ್ಮ ಗಾಂಧಿ ಅವರಿಂದ ‘ರಾಜಋಷಿ’ಎಂದು ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಕನ್ನಂಬಾಡಿ ಕಟ್ಟೆಗೆ ಇಡಲಾಗಿದೆ. ಮಾನ್ಯ ಹೆಚ್.ಸಿ. ಮಹಾದೇವಪ್ಪನವರೇ, ಟಿಪ್ಪು ಸುಲ್ತಾನ್ ಕೆಆರ್‌ಎಸ್‌ ಅಣೆಕಟ್ಟು ಕಟ್ಟಲು ಪ್ರಯತ್ನಿಸಿದ್ದ ಯಾವುದಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಿ, ಕನ್ನಂಬಾಡಿ ಕಟ್ಟೆ ನಿರ್ಮಾಣ ಹಂತದ ಪ್ರತಿ ಹೆಜ್ಜೆಯ ಇತಿಹಾಸದ ದಾಖಲೆಗಳನ್ನು ನಾವು ಬಿಡುಗಡೆ ಮಾಡುತ್ತೇವೆ, ಟಿಪ್ಪು ಪರಿಶ್ರಮದ ಬಗ್ಗೆ ನಿಮ್ಮಲ್ಲಿ ಯಾವುದಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಿ, ಟಿಪ್ಪು ನಿಧನವಾಗಿದ್ದು 1799 ರಲ್ಲಿ ಕನ್ನಂಬಾಡಿ ಕಟ್ಟುವ ಯೋಜನೆ ಪ್ರಾರಂಭಿಸಿದ್ದು 1908 ರಲ್ಲಿ, (ಅಂದರೆ ಶತಮಾನಗಳ ಅಂತರದಲ್ಲಿ ) ನಾಲಿಗೆ ಹೊರಳುತ್ತದೆ ಎಂದು ಇತಿಹಾಸದ ಪುಟಗಳನ್ನು ಗಲೀಜು ಮಾಡಲು ಹೋಗಬೇಡಿ, ಇಡೀ ದೇಶದಲ್ಲೇ ಅತ್ಯಂತ ಶ್ರೇಷ್ಠ ಆಡಳಿತ ನೀಡಿ ವಿಶ್ವಮಾನ್ಯರಾದ ಮೈಸೂರು ರಾಜವಂಶಸ್ಥರು ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚರಿತ್ರೆಯನ್ನು ಸಾಧ್ಯವಾದರೆ ಗೌರವಿಸಿ, ಅಪಮಾನಿಸಿ ಜನರಿಂದ ಛೀಮಾರಿ ಹಾಕಿಸಿಕೊಳ್ಳಬೇಡಿ. ಟಿಪ್ಪು ಸಂತತಿಯನ್ನು ವೈಭವೀಕರಿಸಿ ಮುಸ್ಲಿಂ ಮತಗಳಿಕೆಯನ್ನು ಗಟ್ಟಿಗೊಳಿಸಿಕೊಳ್ಳುವುದು ನಿಮ್ಮ ಕಾರ್ಯ ಸೂಚಿ ಎಂಬುದು ನಾಡಿನ ಜನತೆಗೆ ತಿಳಿದಿದೆ ಎಂದು ವಿಜಯೇಂದ್ರ ಕಿಡಿ ಕಾರಿದ್ದಾರೆ.

‘ಮೈಸೂರು ಸಂಸ್ಥಾನದ ಐತಿಹಾಸಿಕ ಅಭಿವೃದ್ಧಿಗೆ ಮುಂದಾಳತ್ವ ನೀಡಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳು ಅನನ್ಯವಾದವು, ಅಪಾರವಾದವು. ಜ್ಞಾನ, ನೀತಿ ಮತ್ತು ಜನಸೇವೆ ಮೂಲಕ ಅವರು ಕನ್ನಡನಾಡಿಗೆ ನೀಡಿದ ಕೊಡುಗೆಗಳ ಹಿಂದೆ ನಿಂತಿರುವಂತೆಯೇ, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೃಷ್ಣರಾಜಸಾಗರ (KRS) ಅಣೆಕಟ್ಟು ಎಂಬ ದೊಡ್ಡ ಯೋಜನೆಯ ಹಿಂದಿನ ಬಲವಾದ ಚಿಂತನೆ ಮತ್ತು ದೃಷ್ಟಿಕೋನ ಕೂಡ ಅವರದ್ದೇ ಆಗಿದೆ. ಇಂತಹ ಸಂಸ್ಕೃತಿಯ ಪುನೀತ ನೆಲೆಯಲ್ಲಿ, ಮಂಡ್ಯದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರು ನೀಡಿರುವ ‘‘ಕೆ.ಆರ್.ಎಸ್ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್’’ ಎಂಬ ಹೇಳಿಕೆ ಧ್ವಂಸಾತ್ಮಕ, ಇತಿಹಾಸ ವಿರೋಧಿ ಹಾಗೂ ಜನಮಾನಸದಲ್ಲಿ ತಾರತಮ್ಯ ಹುಟ್ಟುಹಾಕುವ ಉದ್ದೇಶದ ಮಾದರಿಯಾಗಿದೆ. ಇದು ಇತಿಹಾಸವನ್ನು ಮರೆಮಾಚುವ, ಅಳಿಸಿ ಹಾಕುವ ಹುನ್ನಾರದ ಅಪಾಯಕಾರಿ ಪ್ರವೃತ್ತಿಯ ಸಂಕೇತವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟ್ವೀಟ್ ಮಾಡಿದ್ದಾರೆ.

For More Updates Join our WhatsApp Group:

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *