ಬಸ್ ಇಲ್ಲದ ಬಿಸಿ ಜನರ ಜೇಬಿಗೆ ಹೊಡೆತ : ದಿಢೀರ್ ಆಟೋ ದರ ಏರಿಕೆ || KSRTC Strike Impact

auto fare hike on ksrtc protest

ಇಂದಿನಿಂದ ಸಾರಿಗೆ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೈಕೋರ್ಟ್​​ ಒಂದು ದಿನದ ತಡೆಯಾಜ್ಞೆ ನಡುವೆಯೂ ಬಸ್​​ಗಳ ಸಂಚಾರದಲ್ಲಿ ಕೆಲ ಗೊಂದಲ ಇದ್ದು, ಸಂಪೂರ್ಣ ಬಸ್​ಗಳು ರಸ್ತೆಗಿಳಿದಿಲ್ಲ. 

ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದಿಢೀರ್​ ಆಟೋ ದರ ಏರಿಕೆ ಮಾಡಿ, ಒಬ್ಬ ಪ್ರಯಾಣಿಕನಿದ್ದರೂ ಕೂಡ 300 ರೂ, 400 ರೂಗಳನ್ನು ವಸೂಲಿ ಮಾಡುತ್ತಿದ್ದಾರೆ.

ಶಾಂತಿನಗರದಿಂದ ಜೀವನ್ ಭೀಮಾನಗರಕ್ಕೆ ತೆರಳಲು ಆಟೋ ಚಾಲಕರೊಬ್ಬರು ಒಬ್ಬ ಸಿಂಗಲ್ ಪ್ರಯಾಣಿಕನಿಂದ 350 ರೂಪಾಯಿಗಳನ್ನು ಡಿಮಾಂಡ್ ಮಾಡಿದ ಘಟನೆಯೊಂದು ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸಿದೆ. ಕೊನೆಗೆ, ಚರ್ಚೆಯ ಬಳಿಕ 250 ರೂಪಾಯಿಗಳಿಗೆ ಒಪ್ಪಿಕೊಂಡ ಚಾಲಕ, ಪ್ರಯಾಣಿಕನನ್ನು ಕರೆದೊಯ್ದಿದ್ದಾರೆ. ಇಲ್ಲಿ ಪ್ರಯಾಣಿಕ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದವರಾಗಿದ್ದು, ಸಾರಿಗೆ ಬಸ್‌ಗಳ ಸೇವೆ ಇಲ್ಲದಿರುವುದರಿಂದ ಆಟೋವನ್ನೇ ಆಶ್ರಯಿಸಬೇಕಾಗಿದೆ. ಆಟೋ ಚಾಲಕನು ದರ ಕೇಳಿದಾಗ ಪ್ರಯಾಣಿಕನಿಗೆ ಶಾಕ್​ ಆಗಿದ್ದು, ಕೊನೆಗೆ 250 ರೂಪಾಯಿಗಳನ್ನು ಪಾವತಿಸಿ ಪ್ರಯಾಣಿಸಿದ್ದಾರೆ.

ಸಾಮಾನ್ಯವಾಗಿ, ಶಾಂತಿನಗರದಿಂದ ಜೀವನ್ ಭೀಮಾನಗರಕ್ಕೆ ಆಟೋ ದರ ಸುಮಾರು 100-150 ರೂಪಾಯಿಗಳಷ್ಟಿರುತ್ತದೆ. ಆದರೆ, ಮುಷ್ಕರದಿಂದಾಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಆಟೋ ಚಾಲಕರು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ದರವನ್ನು ಗಗನಕ್ಕೇರಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ರಾಜ್ಯದ ಸಾರಿಗೆ ಘಟಕಗಳ ಸಿಬ್ಬಂದಿ, 38 ತಿಂಗಳ ವೇತನ ಬಾಕಿ, ವೇತನ ಪರಿಷ್ಕರಣೆ, ಮತ್ತು 2021ರ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿಗಾಗಿ ಈ ಹೋರಾಟಕ್ಕೆ ಕರೆ ನೀಡಿದ್ದಾರೆ. ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಿದ್ದು, ವಿಶೇಷವಾಗಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯುವ ಮಹಿಳೆಯರಿಗೆ ತೊಂದರೆಯಾಗಿದೆ.

Leave a Reply

Your email address will not be published. Required fields are marked *