ಸೀರೆಯಲ್ಲಿ ‘ಆಪರೇಷನ್ ಸಿಂಧೂರ್’ ಶೌರ್ಯ ನೇಯ್ದ ಗದಗಿನ ನೇಕಾರ.|| ‘Operation Sindoor’

ಸೀರೆಯಲ್ಲಿ ‘ಆಪರೇಷನ್ ಸಿಂಧೂರ್’ ಶೌರ್ಯ ನೇಯ್ದ ಗದಗಿನ ನೇಕಾರ.|| 'Operation Sindoor'

ಗದಗ: ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಉಗ್ರರು ಮಾಡಿದ್ದ ದಾಳಿಯಲ್ಲಿ ಕರ್ನಾಟಕ ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಬಳಿಕ ಭಾರತೀಯ ಸೇನೆ ಮೇ 7ರಂದು ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಪ್ರಧಾನಿ ಮೋದಿ ಆಪರೇಶನ್ ಸಿಂಧೂರವನ್ನು ದೇಶದ ಹೆಣ್ಣುಮಕ್ಕಳಿಗೆ ಸಮರ್ಪಿಸಿದ್ದರು. ಇದೀಗ ಇದೇ ಆಪರೇಶನ್ ಸಿಂಧೂರ ಹೆಸರಿನಲ್ಲಿ ಗದಗಿನ ನೇಕಾರರೊಬ್ಬರು ಕೈಮಗ್ಗದಲ್ಲಿ ಸೀರೆ ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸೀರೆಯಲ್ಲಿ ಅರಳಿದ ಆಪರೇಶನ್ ಸಿಂಧೂರ

ಆಪರೇಶನ್ ಸಿಂಧೂರ ಹೆಸರಲಿನಲ್ಲಿ ಸೀರೆ ಸಿದ್ಧಪಡಿಸುವ ಕಲ್ಪನೆ ನೇಕಾರ ತೇಜಪ್ಪ ಚಿನ್ನೂರ್ ಅವರದ್ದು. ತೇಜಪ್ಪ ಚಿನ್ನೂರ್ ಅವರು ಗದಗ ಜಿಲ್ಲೆಯ ಗಜೇಂದ್ರಗಡದ ನೇಕಾರರು. ಆಪರೇಶನ್ ಸಿಂಧೂರ ಹೆಸರಲಿನಲ್ಲಿ ಕೈಮಗ್ಗದಲ್ಲಿ ಸೀರೆ ತಯಾರಿಸಿದ್ದಾರೆ. ಆ ಮೂಲಕ ಅವರು ತಮ್ಮ ಕಾಯಕದಿಂದಲೇ ಭಾರತೀಯ ಸೇನೆ ಕಾರ್ಯಾಚರಣೆಗೆ ಗೌರವ ಸೂಚಿಸಿದ್ದಾರೆ.

ಈ ಸೀರೆಯನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, “ಆಪರೇಷನ್ ಸಿಂಧೂರ” ಎಂದು ದಪ್ಪವಾಗಿ ಇಂಗ್ಲಿಷ್ನಲ್ಲಿ ಮುದ್ರಿಸಲಾಗಿದೆ. ಸೀರೆಯ ರೇಷ್ಮೆ ಬಾರ್ಡರ್ನಲ್ಲಿ ತ್ರಿವರ್ಣ ಧ್ವಜದ ಕಲರ್ನಲ್ಲಿ ಮೂರು ಯುದ್ಧ ವಿಮಾನಗಳನ್ನು ಕಸೂತಿ ಮಾಡಲಾಗಿದೆ. ಇಂದು ಅನೇಕರು ಆಪರೇಶನ್ ಸಿಂಧೂರ ಸೀರೆಗಾಗಿ ತೇಜಪ್ಪ ಚಿನ್ನೂರ್ ಅವರನ್ನು ಹುಡುಕಿಕೊಂಡು ಬರುತ್ತಿದ್ದಾರಂತೆ.

ಪಟ್ಟೇದಂಚಿನ ಸೀರೆಗಳಿಗೆ ಗಜೇಂದ್ರಗಡ ಹೆಸರುವಾಸಿ

ಹೇಳಿಕೇಳಿ ಗಜೇಂದ್ರಗಡ ಶುದ್ಧ ಹತ್ತಿ ನೂಲಿನಿಂದ ತಯಾರಿಸಲ್ಪಡುವ ಪಟ್ಟೇದಂಚಿನ ಸೀರೆಗಳಿಗೆ ಹೆಸರುವಾಸಿ. ಈ ವರ್ಷ ಅವುಗಳಿಗೆ ಜಿಐ ಟ್ಯಾಗ್ ಕೂಡ ಸಿಕ್ಕಿದೆ. ಪ್ರಸ್ತುತ, ಇಲ್ಲಿ ಸುಮಾರು 400 ಕೈಮಗ್ಗಗಳಿದ್ದು, ಅವುಗಳಲ್ಲಿ ಸುಮಾರು 200 ಕೈಮಗ್ಗಗಳಿಂದ ಈ ಪಟ್ಟೇದಂಚಿನ ಸೀರೆಗಳನ್ನು ನೇಯಲಾಗುತ್ತದೆ.

ಇನ್ನು ಈ ಹೊಸ ಬಗೆಯ ಆಪರೇಷನ್ ಸಿಂಧೂರ ಸೀರೆಗಳು ಸಹ ಇದೇ ವಿಧಕ್ಕೆ ಸೇರಿವೆ. ಇವುಗಳನ್ನು ಶುದ್ಧ ಹತ್ತಿಯಿಂದ ಮತ್ತು ರೇಷ್ಮೆ ಬಾರ್ಡರ್ನೊಂದಿಗೆ ತಯಾರಿಸಲಾಗುತ್ತದೆ. ಸೀರೆಯ ಒಂದು ಬದಿಯನ್ನು ಬಲಪಡಿಸಲು, ದಾರಗಳನ್ನು ತುಂಡುಗಳಾಗಿ ಕತ್ತರಿಸಲಾಗುತ್ತದೆ. ಬಳಿಕ ವಾರ್ಪ್ ತಯಾರಿಸಲಾಗುತ್ತದೆ. ಕೈಮಗ್ಗದಿಂದ ಸೀರೆಯಲ್ಲಿ ಸಾಂಪ್ರದಾಯಿಕ ವಿನ್ಯಾಸಗಳನ್ನು ರಚಿಸಲಾಗುತ್ತದೆ.

ಆಪರೇಶನ್ ಸಿಂಧೂರ ಸೀರೆ ಬೆಲೆ ಎಷ್ಟು?

ಪಟ್ಟೇದಂಚಿನ ರೇಷ್ಮೆ ಸೀರೆಗಳ ಬೆಲೆ 2ರಿಂದ 5 ಸಾವಿರ ರೂ. ಗಳವರೆಗೆ ಇರುತ್ತದೆ. ಆದರೆ ಆಪರೇಷನ್ ಸಿಂಧೂರ ಸೀರೆಗಳು ವಿಶೇಷವಾಗಿ 4 ಸಾವಿರ ರೂ. ಬೆಲೆಯಿಂದ ಪ್ರಾರಂಭವಾಗುತ್ತದೆ. ಗುಣಮಟ್ಟಕ್ಕೆ ತಕ್ಕಂತೆ ಅದರ ಬೆಲೆಯೂ ಹೆಚ್ಚಳವಾಗುತ್ತದೆ.

ನೇಕಾರ ತೇಜಪ್ಪ ಚಿನ್ನೂರ್ ಅವರು ಕಳೆದ 40 ವರ್ಷಗಳಿಂದ ಕೈಮಗ್ಗದಲ್ಲಿ ಸೀರೆ ನೇಯುವ ಕಾಯಕ ಮಾಡುತ್ತಿದ್ದಾರೆ. ಜೊತೆಗೆ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕರ ಸಂಘವನ್ನು ಸ್ಥಾಪಿಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ 11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಂದರ್ಭದಲ್ಲಿ ಅವರಿಗೆ 20 ಸಾವಿರ ರೂ. ಬಹುಮಾನ ಮತ್ತು ಸ್ಮರಣಿಕೆಯನ್ನು ನೀಡಲಾಗುತ್ತಿದೆ

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *