ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ ಘಟನೆ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರು ಕೂಡ ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು ಸಮಾಧಿ ಇರಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಆದರೆ ಕಾನೂನಿನ ತೊಡಕಿನಿಂದಾಗಿ ಮೈಸೂರಿಗೆ ಸ್ಮಾರಕ ಸ್ಥಳಾಂತರ ಆಯಿತು. ಇತ್ತೀಚೆಗೆ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಸಮಾಧಿಯನ್ನು ನೆಲಸಮ ಮಾಡಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಎಲ್ಲವೂ ಕಾನೂನಿನ ಪ್ರಕಾರವೇ ಆಗಿದೆ’ ಎಂದಿದ್ದಾರೆ ರಂಗಾಯಣ ರಘು.
‘ವಿಷ್ಣು ಸರ್ ಹೆಚ್ಚು ಸಮಯ ಕಳೆದಿದ್ದು ಭಾರತಿ ಮೇಡಂ ಜೊತೆ. ಈಗಲೂ ಭಾರತಿ ಮೇಡಂ ಇದ್ದಾರೆ. ಅಳಿಯ, ಮಕ್ಕಳು ಇದ್ದಾರೆ. ತಾವು ಹೇಗಿರಬೇಕು ಎಂಬುದನ್ನೆಲ್ಲ ವಿಷ್ಣುವರ್ಧನ್ ಅವರು ಭಾರತಿ ಮೇಡಂ ಬಳಿ ಹೇಳಿದ್ದಾರೆ. ಅದಕ್ಕಾಗಿಯೇ ಅವರು ಮೈಸೂರಿನಲ್ಲಿ ಸ್ಮಾರಕ ಮಾಡಿದ್ದಾರೆ. ಬಾಲಣ್ಣ ಅವರ ಸ್ಟುಡಿಯೋ ಜಾಗ ಆದ್ದರಿಂದ ಕಾನೂನಿಕ ಸಮಸ್ಯೆ ಆಗಿದೆ’ ಎಂದು ರಂಗಾಯಣ ರಘು ಹೇಳಿದ್ದಾರೆ.
‘ಇಲ್ಲಿ ಯಾರದ್ದು ಸರಿ, ಯಾರದ್ದು ತಪ್ಪು ಅಂತ ಹೇಳೋಕೆ ಆಗಲ್ಲ. ಭಾರತಿ ಮೇಡಂ ಮತ್ತು ಅನಿರುದ್ಧ್ ಅವರು ತುಂಬಾ ಪ್ರಯತ್ನ ಮಾಡಿದರು. ವೀರಕಪುತ್ರ ಶ್ರೀನಿವಾಸ್ ಮುಂತಾದ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮ ಮಾಡಿದರು. ಸದ್ಯಕ್ಕೆ ಅದು ಆಗಲ್ಲ ಎಂದಾದಾಗ ವಿಷ್ಣು ಸರ್ ಅವರ ಹೆಸರೇ ಹಾಗೆ ಎನಿಸುತ್ತದೆ. ಅವರು ಇದ್ದಾಗಲೂ ಹಾಗೆಯೇ ಆಯಿತು. ಭಾರತಿ ಮೇಡಂ ಯೋಚನೆ ಮಾಡಿ, ಮೈಸೂರಿನಲ್ಲಿ ಸ್ಮಾರಕ ಮಾಡಿದರು’ ಎಂದಿದ್ದಾರೆ ರಂಗಾಯಣ ರಘು.
‘ಭಾರತಿ ಮೇಡಂ ಅವರಿಗೆ ಎಲ್ಲವೂ ಗೊತ್ತಿರುತ್ತದೆ. ಅಭಿಮಾನಿಗಳು ಸಿನಿಮಾ ನೋಡಿ ಅಭಿಮಾನ ಬೆಳೆಸಿಕೊಳ್ಳುತ್ತಾರೆ. ಆದರೆ ಹಗಲು-ರಾತ್ರಿ ಜೊತೆಗೆ ಇದ್ದವರು ಭಾರತಿ ಮೇಡಂ. ಏನಾಗಬೇಕು, ಏನಾಗಬಾರದು ಎಂಬುದನ್ನು ಅವರಿಗೆ ವಿಷ್ಣುವರ್ಧನ್ ಹೇಳಿರುತ್ತಾರೆ. ಕಾನೂನಿನ ತೊಡಕು ಇದ್ದು, ಇಲ್ಲಿಗೆ ಬರಬೇಡಿ, ಆಚೆಗೆ ಹೋಗಿ ಎಂದರೆ ಮತ್ತೆ ಅವಮಾನ ಆಗುತ್ತದೆ. ಹಾಗಾಗಿ ಮೈಸೂರಿನಲ್ಲಿ ಸ್ಮಾರಕ ಮಾಡಿದ್ದಾರೆ. ಮೈಸೂರಿಗೆ ಚಾಮುಂಡಿ ಬೆಟ್ಟ ನೋಡಲು ಹೋದಂತೆ ವಿಷ್ಣುವರ್ಧನ್ ಸ್ಮಾರಕ ನೋಡಲೂ ಹೋಗುತ್ತೇವೆ.’ ಎಂಬುದು ರಂಗಾಯಣ ರಘು ಮಾತು.
‘ರಾತ್ರೋರಾತ್ರಿ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಿದ್ದಾರೆ ಅಂತ ಹೇಳುತ್ತಾರೆ. ಪೊಲೀಸರು ಬಂದಿದ್ದಾರೆ ಎಂದರೆ ಕಾನೂನಿನ ಪ್ರಕಾರವೇ ಆಯಿತಲ್ಲ. ಅದು ಬಾಲಣ್ಣ ಅವರ ಜಾಗ. ಆವತ್ತು ಅಂಬರೀಷ್ ಇದ್ದರು. ಇಲ್ಲಿ ಮಾಡೋಣ ಅಂದರು, ಮಾಡಿಬಿಟ್ಟರು. ನಾವೆಲ್ಲರೂ ಅಲ್ಲಿಗೆ ಹೋಗಿದ್ದೆವು. ಇಂಥ ಕಡೆ ಸಮಾಧಿ ಇರಬೇಕು ಎಂಬ ಆಸೆ ಅಭಿಮಾನಿಗಳಿಗೆ ಸಹಜ. ಆದರೆ ಅದಕ್ಕೆ ಕಾನೂನಾತ್ಮಕವಾಗಿ ಕೂಡ ಎಲ್ಲವೂ ಸರಿಯಾಗಿ ಇರಬೇಕು’ ಎಂದು ರಂಗಾಯಣ ರಘು ಹೇಳಿದ್ದಾರೆ.
For More Updates Join our WhatsApp Group :