ಬೆಂಗಳೂರು: ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಆರ್.ವಿ.ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಇಂದಿನಿಂದ (ಸೋಮವಾರ) ರೈಲುಗಳ ಸೇವೆ ಆರಂಭವಾಗಿದೆ. ಇದರೊಂದಿಗೆ ಈ ಮಾರ್ಗದಲ್ಲಿ ರಸ್ತೆ ಸಂಚಾರ ದಟ್ಟಣೆಯ ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಲಿದೆ.
ಈ ಬಗ್ಗೆ ಭಾನುವಾರ ಪ್ರಕಟಣೆ ಹೊರಡಿಸಿರುವ ಬಿಎಂಆರ್ಸಿಎಲ್, ಸೋಮವಾರದಿಂದ ಶನಿವಾರದವರೆಗೆ ಆರ್.ವಿ.ರಸ್ತೆ ಹಾಗೂ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 6.30ಕ್ಕೆ ರೈಲು ಸೇವೆಗಳು ಆರಂಭವಾಗಿವೆ. ಬೆಳಗ್ಗೆ 6.30ಕ್ಕೆ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಮೊದಲ ಹಾಗೂ ಬೆಳಗ್ಗೆ 7.10ಕ್ಕೆ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಮೊದಲ ರೈಲು ಸೇವೆ ಆರಂಭವಾಗಿದೆ. ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ಮಾರ್ಗ ಮಧ್ಯೆ ಒಟ್ಟು 16 ನಿಲ್ದಾಣಗಳಲ್ಲಿನ (ಎರಡು ಟರ್ಮಿನಲ್ಗಳ ಸಹಿತ) ನಿಲುಗಡೆ ಸಹಿತ ಈ ವಿಭಾಗದ ಒಟ್ಟು ಪ್ರಯಾಣದ ಸಮಯವು ಒಂದು ದಿಕ್ಕಿನಲ್ಲಿ ಸುಮಾರು 35 ನಿಮಿಷಗಳಾಗಿರಲಿವೆ ಎಂದು ಹೇಳಿತ್ತು
ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10.42ಕ್ಕೆ ಮತ್ತು ಆರ್.ವಿ.ರಸ್ತೆಯ ಇಂಟರ್ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.55ಕ್ಕೆ ಹೊರಡಲಿದೆ. ರಾತ್ರಿ 10.00 ಗಂಟೆಯ ನಂತರ ರೈಲುಗಳ ಸಂಚಾರದ ಅವಧಿ ಕಡಿಮೆಯಾಗಲಿದೆ. ಭಾನುವಾರಗಳಲ್ಲಿ ರೈಲು ಸೇವೆಗಳು ಬೆಳಗ್ಗೆ 7.00 ಗಂಟೆಗೆ ಪ್ರಾರಂಭವಾಗಲಿವೆ ಹಾಗೂ ಅವಧಿಯು ಸಾಮಾನ್ಯ ದಿನಗಳಂತೆಯೇ ಇರಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಹಳದಿ ಮಾರ್ಗದಲ್ಲಿನ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ 60 ರೂ. ಇರಲಿದೆ. ಟೋಕನ್ಗಳು, NCMC ಕಾರ್ಡ್ಗಳು, ಬಿಎಂಆರ್ಸಿಎಲ್ ಸ್ಮಾರ್ಟ್ ಕಾರ್ಡ್ಗಳು, QR ಟಿಕೆಟ್ಗಳು ಎಂದಿನಂತೆಯೇ ಲಭ್ಯವಿರಲಿವೆ. ಐಫೋನ್ ಬಳಸುವ ನಮ್ಮ ಮೆಟ್ರೋ ಪ್ರಯಾಣಿಕರು 2025ರ ಆಗಸ್ಟ್ 11ರಿಂದ ಆ್ಯಪಲ್ ಸ್ಟೋರ್ನಿಂದ ನಮ್ಮ ಮೆಟ್ರೋದ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ QR ಟಿಕೆಟ್ಗಳ ಖರೀದಿ ಹಾಗೂ ಬಿಎಂಆರ್ಸಿಎಲ್ ಸ್ಮಾರ್ಟ್ ಕಾರ್ಡ್ಗಳ ರೀಚಾರ್ಜ್ ಮಾಡಬಹುದಾಗಿದೆ.
For More Updates Join our WhatsApp Group :