ತುಮಕೂರು: ಮಹಿಳೆಯ ದೇಹದ ತುಂಡುಗಳು ರಸ್ತೆ ಬದಿಯಲ್ಲಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಮಹಿಳೆ ಗುರುತು ಕೂಡ ಪತ್ತೆ ಆಗಿದೆ. ಲಕ್ಷ್ಮಿದೇವಮ್ಮ(42) ಕೊಲೆಯಾದ ಮಹಿಳೆ. ದಂತ ವೈದ್ಯ ಅಳಿಯ ರಾಮಚಂದ್ರಯ್ಯ, ಸತೀಶ್ ಮತ್ತು ಕಿರಣ್ ಬಂಧಿತರು. ಅತ್ತೆ ಕಾಟಕ್ಕೆ ಬೇಸತ್ತು ಅಳಿಯನಿಂದಲೇ ಕೃತ್ಯವೆಸಗಲಾಗಿದೆ. ಸದ್ಯ ಕೊರಟಗೆರೆ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಅಳಿಯನಿಂದಲೇ ಅತ್ತೆ ಕೊಲೆ
ಇತ್ತೀಚೆಗೆ ಕೊರಟಗೆರೆಯ ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದ ಬಳಿಯಿಂದ ಸಿದ್ದರಬೆಟ್ಟದ ರಸ್ತೆ ತನಕ, ಅಂದರೇ ಸರಿಸುಮಾರು 30ಕ್ಕೂ ಹೆಚ್ಚು ಕಿಲೋ ಮೀಟರ್ ವ್ಯಾಪ್ತಿಯಲ್ಲಿ, 17 ಸ್ಥಳಗಳಲ್ಲಿ ಪತ್ತೆಯಾದ ಕಪ್ಪು, ಹಳದಿ ಕವರ್ ಗಳಲ್ಲಿ ಮಹಿಳೆ ದೇಹದ ಅಂಗಾಂಗಳು ದೊರಕಿದ್ದವು. ಘಟನೆಯಿಂದ ಇಡೀ ತುಮಕೂರೇ ಬೆಚ್ಚಿಬಿದ್ದಿತ್ತು.
ಅತ್ತೆ ಕಾಟಕ್ಕೆ ಬೇಸತ್ತ ದಂತ ವೈದ್ಯ ಅಳಿಯ ರಾಮಚಂದ್ರಯ್ಯ, ತನ್ನ ಸ್ನೇಹಿತರಾದ ಸತೀಶ್ ಮತ್ತು ಕಿರಣ್ ಜೊತೆ ಸೇರಿ ಕೊಲೆ ಮಾಡುತ್ತಾರೆ. ಬಳಿಕ ಆರೋಪಿಗಳು ಮೂರು ದಿನ ಶವವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆ.6ರಂದು ದೇಹವನ್ನು ತುಂಡು ಮಾಡಿ ಬಿಸಾಡಿದ್ದರು. ಬಲಿಕ ರಾಮಚಂದ್ರ ಧರ್ಮಸ್ಥಳಕ್ಕೆ ತೆರಳಿದ್ದ. ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ಮಾಡಿದ ಪೊಲೀಸರು, ಈ ವೇಳೆ ಸಂಗತಿ ಬಯಲಾಗಿದೆ.
ಇತ್ತ ಆ.3ರಂದು ಮೃತರ ಕುಟುಂಬಸ್ಥರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಆ.7ರಂದು ಚಿಂಪುಗಾನಹಳ್ಳಿ ಬಳಿ ದೇಹದ ಒಂದು ಕೈ ಪತ್ತೆಯಾಗಿತ್ತು. ಕೈ ಕಂಡ ಕುಟುಂಬಸ್ಥರು ಲಕ್ಷ್ಮೀದೇವಮ್ಮಳದ್ದಲ್ಲ ಎಂದಿದ್ದರು. ಬಳಿಕ ಅದು ಲಕ್ಷ್ಮೀದೇವಮ್ಮಳದ್ದು ಎಂಬುದಾಗಿ ಗೊತ್ತಾಗಿದೆ. ಇನ್ನು 30 ಕಿ.ಮೀ ವ್ಯಾಪ್ಯಿಯ ಹಲವೆಡೆ ದೇಹದ ತುಂಡು ಪತ್ತೆಯಾಗಿದ್ದವು. ಪೊಲೀಸರ ದಿಕ್ಕು ತಪ್ಪಿಸಲು ಹಂತಕರು ಯತ್ನಿಸಿದ್ದರು. ಬಳಿಕ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.