ಬೆಂಗಳೂರು: ಬೆಂಗಳೂರಿನಲ್ಲಿ ‘ಕೂಲಿ’ ಸಿನಿಮಾದ ಟಿಕೆಟ್ ದರ ಮಿರಿ ಮೀರಿ ಏರಿಕೆಯಾಗಿದೆ. ಸರ್ಕಾರ 200 ರೂಪಾಯಿಗಳ ಮಿತಿಯನ್ನು ಹೇರಲು ಆದೇಶ ಹೊರಡಿಸಲು ಸಿದ್ಧವಾಗಿದೆ. ‘ಸು ಫ್ರಮ್ ಸೋ’ ಚಿತ್ರದ ಶೋಗಳನ್ನು ರದ್ದುಗೊಳಿಸಿ ‘ಕೂಲಿ’ ಮತ್ತು ‘ವಾರ್ 2’ ಚಿತ್ರಗಳಿಗೆ ಆದ್ಯತೆ ನೀಡುತ್ತಿರುವುದು ಕನ್ನಡಿಗರಲ್ಲಿ ಬೇಸರ ಉಂಟುಮಾಡಿದೆ.
ಬೆಂಗಳೂರಿನಲ್ಲಿ ‘ಕೂಲಿ’ ಸಿನಿಮಾಗೆ ಭರ್ಜರಿ ಶೋ ಸಿಕ್ಕಿದೆ. ರಜನಿಕಾಂತ್ ನಟನೆಯ ಈ ಸಿನಿಮಾದಲ್ಲಿ ಉಪೇಂದ್ರ, ಆಮಿರ್ ಖಾನ್ ಸೇರಿದಂತೆ ಅನೇಕ ಸ್ಟಾರ್ ಹಿರೋಗಳು ಇದ್ದಾರೆ. ಅನೇಕ ಕಡೆಗಳಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಬದಲು ಕೂಲಿ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ‘ಕೂಲಿ’ ಚಿತ್ರದ ಟಿಕೆಟ್ ಬೆಲೆ 400 ರೂಪಾಯಿಗೂ ಅಧಿಕವಾಗಿದೆ. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಮಾತನಾಡಿದ್ದಾರೆ. ಅವರು ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ.
ಕರ್ನಾಟಕ ಸರ್ಕಾರ ಒಂದು ಆದೇಶ ಹೊರಡಿಸಲು ಸಿದ್ಧತೆ ನಡೆಸಿದೆ. ಸಿನಿಮಾದ ಟಿಕೆಟ್ ದರ 200 ರೂಪಾಯಿ ಮಿತಿ ದಾಟದಂತೆ ಆದೇಶ ಇದೆ. ಈ ಆದೇಶಕ್ಕೆ ವಿರೋಧವಿದ್ದರೆ ತಿಳಿಸುವಂತೆ ಸರ್ಕಾರ ಸೂಚಿಸಿದೆ. ಈ ಆದೇಶ ಇನ್ನು ಎರಡರಿಂದ ಮೂರು ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ ಎಂಬುದು ನರಸಿಂಹಲು ಅವರ ಮಾತು. ಈ ರೀತಿಯ ಬೆಲೆ ಏರಿಕೆಯನ್ನು ನಮ್ಮಿಂದ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ಆದೇಶ ಜಾರಿಗೆ ಬಂದರೆ ಪ್ರೇಕ್ಷಕರು ನಿಟ್ಟುಸಿರು ಬಿಡುತ್ತಾರೆ. ಸದ್ಯ ವೀಕೆಂಡ್ನಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ‘ಕೂಲಿ’ ಸಿನಿಮಾದ ಟಿಕೆಟ್ ದರ 400 ರೂಪಾಯಿಯಿಂದ ಸಾವಿರ ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಬುಕ್ ಮೈ ಶೋ ತೆರಿಗೆ ಸೇರಿದರೆ ಈ ದರ ಮತ್ತಷ್ಟು ಹೆಚ್ಚಲಿದೆ. ಇನ್ನು ಎರಡು ಮೂರು ದಿನಗಳಲ್ಲಿ ಆದೇಶ ಜಾರಿಗೆ ಬಂದರೆ ಪ್ರೇಕ್ಷಕರು ನಿಟ್ಟುಸಿರು ಬಿಡಲಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾ ಅನೇಕ ಕಡೆಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗಾಗಲೇ 100 ಕೋಟಿ ರೂಪಾಯಿ ಕ್ಲಬ್ ಸೇರುವ ಸೂಚನೆ ಸಿಕ್ಕಿದೆ. ಬೆಂಗಳೂರಿನಲ್ಲಿ ಅನೇಕ ಕಡೆಗಳಲ್ಲಿ ಈ ಶೋನ ತೆಗೆದು ‘ಕೂಲಿ’ ಹಾಗೂ ‘ವಾರ್ 2’ ಚಿತ್ರಗಳಿಗೆ ಮಣೆ ಹಾಕುವ ಕೆಲಸ ಮಾಡಲಾಗುತ್ತಿದೆ. ಇದು ಕನ್ನಡಿಗರ ಬೇಸರಕ್ಕೆ ಕಾರಣ ಆಗಿದೆ. ಇದನ್ನು ಕೂಡ ‘ಖಂಡಿಸೋದಾಗಿ’ ನರಸಿಂಹಲು ಹೇಳಿದ್ದಾರೆ.
For More Updates Join our WhatsApp Group :