ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನ ನಮ್ಮ ಮೆಟ್ರೋದ ಟಿಕೆಟ್ ದರ ಏರಿಕೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ, ನಮ್ಮ ಮೆಟ್ರೋದಲ್ಲಿ ಕೊಂಡಯ್ಯುವ ಬ್ಯಾಗ್ಗೂ ಶುಲ್ಕ ಪಾವತಿಸಿ ಟಿಕೆಟ್ ಪಡೆಯಬೇಕು ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಹೌದು, ಓರ್ವ ಪ್ರಯಾಣಿಕ ತನ್ನ ದೊಡ್ಡ ಗಾತ್ರದ ಬ್ಯಾಗ್ ಅನ್ನು ಮೆಟ್ರೋ ರೈಲಿನಲ್ಲಿ ಕೊಂಡೊಯ್ಯಲು 30 ರೂ. ಶುಲ್ಕ ಪಾವತಿ ಮಾಡಿದ್ದಾರೆ. ಈ ಕುರಿತು ಪ್ರಯಾಣಿಕ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಾಕಿ ಬಿಎಂಆರ್ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕನ ಪೋಸ್ಟ್
“ನಮ್ಮ ಮೆಟ್ರೋ ರೈಲಿನಲ್ಲಿ ಬ್ಯಾಗ್ ಕೊಂಡೊಯ್ಯಲು 30 ರೂ. ಶುಲ್ಕ ಪಾವತಿಸಬೇಕು ಎಂದು ಕೇಳಿ ನಾನು ದಿಗ್ಬ್ರಾಂತನಾದೆ. ಬೆಂಗಳೂರು ನಮ್ಮ ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ಬ್ಯಾಗ್ಗೆ ಶುಲ್ಕ ಪಾವತಿ ಮಾಡುವುದು ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆಯಾಗುತ್ತದೆ. ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದನ್ನು ಬಿಎಂಆರ್ಸಿಎಲ್ ಹೇಗೆ ತಡೆಯುತ್ತಿದೆ ಎಂಬುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮೆಟ್ರೋದಲ್ಲಿ ಲಗೇಜ್ ಶುಲ್ಕ ಎಷ್ಟಿದೆ?
ನಮ್ಮ ಮೆಟ್ರೋದಲ್ಲಿ ಒಬ್ಬ ವ್ಯಕ್ತಿ 60 ಸೆಂ.ಮೀ X 45 ಸೆಂ ಮೀ X 25 ಸೆಂ ಮೀ (ಉದ್ದ X ಅಗಲ X ಎತ್ತರ) 15 ಕೆಜಿ ಒಳಗಿನ ಬ್ಯಾಗ್ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಒಂದು ವೇಳೆ ಪ್ರಯಾಣಿಕರು ಹೆಚ್ಚುವರಿ ಬ್ಯಾಗ್ /ಹೆಚ್ಚುವರಿ ಬ್ಯಾಗ್ ಮತ್ತು ದೊಡ್ಡ ಗಾತ್ರದ ಬ್ಯಾಗ್ ಅನ್ನು ಕೊಂಡೊಯ್ಯಲು ಪ್ರತಿ ಬ್ಯಾಗ್ಗೆ 30 ರೂ. ಶುಲ್ಕ ಪಾವತಿಸಿ ಟಿಕೆಟ್ ಪಡೆಯಬೇಕು. ಈ ಲಗೇಜ್ ಟಿಕೆಟ್ ಅನ್ನು ಗ್ರಾಹಕ ಸೇವಾ ಕೇಂದ್ರದಲ್ಲಿ ಖರೀದಿಸಬಹುದು,” ಎಂದು ನಮ್ಮ ಮೆಟ್ರೋ ನಿಯಮಗಳಲ್ಲಿ ಇದೆ.
ಬ್ಯಾಗ್ ಟಿಕೆಟ್ ಪಡೆಯದಿದ್ದರೆ ಎಷ್ಟು ದಂಡ?
ಹೆಚ್ಚುವರಿ ಬ್ಯಾಗ್ಗೆ ಟಿಕೆಟ್ ಖರೀದಿಸದಿದ್ದರೆ, ರೂ. 250 ದಂಡ ವಿಧಿಸಲಾಗುತ್ತದೆ. ಹೆಚ್ಚುವರಿ ಬ್ಯಾಗ್ಗೆ ಶುಲ್ಕ ಪಾವತಿಸದೆ ಪ್ರಯಾಣಿಸುವಾಗ, ಮೆಟ್ರೋ ರೈಲ್ವೆ ಆಡಳಿತ ಮಂಡಳಿಯ ಯಾವುದೇ ಅಧಿಕಾರಿ ಆ ಪ್ರಯಾಣಿಕನನ್ನು ರೈಲಿನಿಂದ ಹೊರಗೆ ಕಳುಹಿಸುವ ಅಧಿಕಾರ ಹೊಂದಿದ್ದಾರೆ” ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ.
For More Updates Join our WhatsApp Group :