ಬೆಳಗ್ಗೆ ಎದ್ದ ಬಳಿಕ ಎಲ್ಲರೂ ಒಂದಷ್ಟು ದಿನಚರಿಗಳನ್ನು ಪಾಲಿಸುತ್ತಾರೆ. ಕೆಲವರು ಬೆಳಗ್ಗೆ ಬೆಳಗ್ಗೆ ಮೊಬೈಲ್ ನೋಡುತ್ತಾ ಕುಳಿತರೆ, ಇನ್ನೂ ಕೆಲವರು ಯೋಗ ವ್ಯಾಯಾಮ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುತ್ತಾರೆ. ಹೀಗೆ ಕೆಲವರು ಸಕಾರಾತ್ಮಕವಾಗಿ ದಿನವನ್ನು ಪ್ರಾರಂಭಿಸಿದರೆ, ಇನ್ನೂ ಕೆಲವರು ತಮ್ಮ ದಿನವನ್ನು ಜಡತ್ವದಿಂದ ಪ್ರಾರಂಭಿಸುತ್ತಾರೆ. ಈ ಜಡತ್ವದ ದಿನಚರಿಗಳು ನಿಮ್ಮ ಸಂಪೂರ್ಣ ದಿನವನ್ನು ಹಾಳು ಮಾಡುವುದು ಮಾತ್ರವಲ್ಲದೆ ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಬೆಳಗಿನ ಹೊತ್ತು ನೀವು ಈ ಕೆಲವು ಅಭ್ಯಾಸಗಳನ್ನು ಪಾಲಿಸುತ್ತಿದ್ದರೆ, ಇಂದೇ ಅದನ್ನು ಬಿಟ್ಟುಬಿಡಿ.
ಆರೋಗ್ಯದ ಮೇಲೆ ಪರಿಣಾಮ ಬೀರುವ ಬೆಳಗಿನ ಅಭ್ಯಾಸಗಳು:
ಎದ್ದ ತಕ್ಷಣ ಮೊಬೈಲ್ ನೋಡುವುದು: ಅನೇಕರು ಎದ್ದ ತಕ್ಷಣವೇ ಮೊಬೈಲ್ ನೋಡುತ್ತಾರೆ. ಮತ್ತು ಗಂಟೆಗಟ್ಟಲೆ ಮೊಬೈಲ್ ನೋಡುತ್ತಲೇ ಕುಳಿತು ಬಿಡುತ್ತಾರೆ. ಆದ್ರೆ ಖಂಡಿತವಾಗಿಯೂ ಈ ಅಭ್ಯಾಸ ಒಳ್ಳೆಯದಲ್ಲ. ಎದ್ದ ತಕ್ಷಣ ಮೊಬೈಲ್ ನೋಡುವುದರಿಂದ ವಿಶ್ರಾಂತಿ ಹಂತದಲ್ಲಿದ್ದ ಕಣ್ಣುಗಳಿಗೆ ಒಮ್ಮೆಲೆ ಒತ್ತಡ ಬೀಳುತ್ತದೆ. ಇದು ನೆಮ್ಮದಿಯನ್ನು ಕೆಡಿಸುವುದರ ಜೊತೆಗೆ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಎದ್ದ ತಕ್ಷಣ ಮೊಬೈಲ್ ನೋಡಬೇಡಿ. ಅದರ ಬದಲು ಅರ್ಧ ಗಂಟೆ ಪುಸ್ತಕ ಓದುವುದೋ, ಧ್ಯಾನ, ವ್ಯಾಯಾಮದಂತಹ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ಬೆಳಗಿನ ಉಪಹಾರ ತಪ್ಪಿಸುವುದು: ಕಾಲೇಜು, ಆಫೀಸ್‌ಗೆ ಲೇಟ್ ಆಗುತ್ತೆ ಅನ್ನೋ ಕಾರಣಕ್ಕೆ ಅದೆಷ್ಟೋ ಜನ ಬೆಳಗಿನ ಉಪಹಾರವನ್ನೇ ಸೇವನೆ ಮಾಡುವುದಿಲ್ಲ. ಆದ್ರೆ ಈ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ಇದು ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಹೀಗೆ ಇದು ದೇಹಕ್ಕೆ ಹಾನಿ ಮಾಡುವುದು ಮಾತ್ರವಲ್ಲದೆ ಇದರಿಂದ ಮನಸ್ಥಿತಿ ಮತ್ತು ಸ್ಪಷ್ಟವಾಗಿ ಯೋಚಿಸುವ ಸಾಮರ್ಥ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಗಿನ ಹೊತ್ತು ಆರೋಗ್ಯಕರ, ಪೌಷ್ಠಿಕಾಂಶಯುಕ್ತ ಉಪಹಾರವನ್ನು ಸೇವನೆ ಮಾಡಿ.
ನೀರು ಕುಡಿಯದೇ ಇರುವುದು: ನೀರು ಕುಡಿಯದೇ ಇರುವ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ರಾತ್ರಿ ಮಲಗಿದ ನಂತರ ದೇಹವು ಸ್ವಲ್ಪ ನಿರ್ಜಲೀಕರಣಗೊಳ್ಳುತ್ತದೆ, ಇದರಿಂದಾಗಿ ಕೆಲವೊಮ್ಮೆ ಬೆಳಿಗ್ಗೆ ಆಯಾಸದ ಅನುಭವವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಇದನ್ನು ನಿವಾರಿಸಲು, ನೀವು ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಮೆದುಳನ್ನು ಸಕ್ರಿಯಗೊಳಿಸುತ್ತದೆ.
ನಕಾರಾತ್ಮಕ ಆಲೋಚನೆಗಳು: ಕೆಲವರು ಬೆಳಗ್ಗೆ ಎದ್ದ ತಕ್ಷಣವೇ ನಕಾರಾತ್ಮಕ ಆಲೋಚನೆಗಳ ಬಗ್ಗೆ ಸ್ವಚರ್ಚೆಯನ್ನು ಮಾಡುತ್ತಾರೆ. ಆದರೆ ಈ ಅಭ್ಯಾಸ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಬೆಳಿಗ್ಗೆ ನೀವು ಏನು ಯೋಚಿಸುತ್ತೀರಿ ಎಂಬುದು ನಿಮ್ಮ ಭಾವನೆಯ ಮೇಲೆ ಪ್ರತಿಫಲಿಸುತ್ತದೆ. ಹಾಗಾಗಿ ಸಕಾರಾತ್ಮಕವಾಗಿ ಯೋಚಿಸಿ. ಇದರಿಂದ ನಿಮ್ಮ ದಿನ ಚೆನ್ನಾಗಿರುವುದು ಮಾತ್ರವಲ್ಲದೆ ನಿಮ್ಮ ಮನಸ್ಥಿತಿಯೂ ಸುಧಾರಿಸುತ್ತದೆ.
ದೈಹಿಕ ಚಟುವಟಿಕೆ ಮಾಡದಿರುವುದು: ಜಡ ಜೀವನಶೈಲಿ ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ದೈಹಿಕ ಚಟುಟಿಕೆಗಳ ಕೊರತೆಯಿಂದ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಂತೆ. ಆದ್ದರಿಂದ ಎದ್ದ ಬಳಿಕ ಮೊಬೈಲ್ ನೋಡುವ ಬದಲು ಕನಿಷ್ಠ ಮೂವತ್ತು ನಿಮಿಷಗಳ ಕಾಲ ಯೋಗ, ಧ್ಯಾನ, ವ್ಯಾಯಾಮಗಳನ್ನು ಮಾಡಿ.
For More Updates Join our WhatsApp Group :