‘AI’ ಈಗ ವಿಶ್ವದೆಲ್ಲೆಡೆ ಚರ್ಚೆ ಹುಟ್ಟುಹಾಕಿರುವ ವಿಷಯ. ಎಐ ಇಡೀ ವಿಶ್ವವನ್ನೇ ಬದಲಾಯಿಸಲಿದೆ ಎನ್ನಲಾಗುತ್ತಿದೆ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ಎಐ ತಂದಿದೆ. ಹಲವಾರು ಕ್ಷೇತ್ರಗಳಲ್ಲಿ ಎಐ ಅನ್ನು ಈಗಾಗಲೇ ಬಳಸಲಾಗುತ್ತಿದ್ದು, ಮಾನವ ಶ್ರಮವನ್ನು ಕಡಿಮೆ ಮಾಡಲಾಗಿದೆ ಜೊತೆಗೆ ಅದ್ಭುತ ಫಲಿತಾಂಶವನ್ನು ಸಹ ಪಡೆಯಲಾಗುತ್ತಿದೆ. ಇದೀಗ ಚಿತ್ರರಂಗದಲ್ಲಿಯೂ ಸಹ ಎಐ ಬಳಕೆ ಆರಂಭವಾಗಿದೆ. ಇದೀಗ ಭಾರತದ ಮೊದಲ ಫೀಚರ್ ಫಿಲಂ ಅವಧಿಯ ‘ಎಐ’ ಸಿನಿಮಾ ತಯಾರಾಗಿದ್ದು, ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಎಐ ಬಳಸಿ ಹಲವು ಕಿರುಚಿತ್ರ, ವಿಡಿಯೋಗಳನ್ನು ಸೃಷ್ಟಿಸಲಾಗಿದೆ. ಸಿನಿಮಾ ನಿರ್ಮಾಣದ ಪ್ರಯತ್ನಗಳು ಸಹ ಆಗಿವೆ. ಆದರೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಫೀಚರ್ ಫಿಲಂ ಅವಧಿಯ ಸಂಪೂರ್ಣ ಎಐ ಬಳಸಿ ಸಿನಿಮಾ ನಿರ್ಮಿಸಲಾಗಿದೆ. ‘ಚಿರಂಜೀವಿ ಹನುಮಾನ್’ ಹೆಸರಿನ ಪೌರಾಣಿಕ ಸಿನಿಮಾವನ್ನು ಸಂಪೂರ್ಣ ಎಐ ಬಳಸಿ ನಿರ್ಮಾಣ ಮಾಡಲಾಗಿದೆ. ಸಿನಿಮಾ ಬಿಡುಗಡೆಗೆ ಸಹ ಸಜ್ಜಾಗಿದೆ ಆದರೆ ಕೆಲವು ವಿರೋಧಗಳು ಈ ಸಿನಿಮಾಕ್ಕೆ ಎದುರಾಗಿದೆ.
ಎಐ ಸಿನಿಮಾ ‘ಚಿರಂಜೀವಿ ಹನುಮಾನ್: ದಿ ಎಟರ್ನಲ್’ ಸಿನಿಮಾವನ್ನು ವಿಜಯ್ ಸುಬ್ರಹ್ಮಣ್ಯಂ ಮತ್ತು ವಿಕ್ರಂ ಮಲ್ಹೋತ್ರಾ ಅವರುಗಳು ಈ ಎಐ ಸಿನಿಮಾ ನಿರ್ಮಾಣ ಮಾಡಿದ್ದು, ಮುಂದಿನ ವರ್ಷ ಹನುಮಾನ್ ಜಯಂತಿಗೆ ಭಾರತದಾದ್ಯಂತ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧರಾಗಿದ್ದಾರೆ.
ಆದರೆ ಇದೀಗ ಖ್ಯಾತ ನಿರ್ದೇಶಕ, ನಟ ಅನುರಾಗ್ ಕಶ್ಯಪ್ ಅವರು ‘ಚಿರಂಜೀವಿ ಹನುಮಾನ್’ ಎಐ ಸಿನಿಮಾಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಕಲಾವಿದರ ಬಗ್ಗೆ ತಂತ್ರಜ್ಞರ ಬಗ್ಗೆ, ಕಲೆಯ ಬಗ್ಗೆ ಗೌರವ ಇರುವ ಯಾರೊಬ್ಬರೂ ಸಹ ಇಂಥಹಾ ಕೃತ್ಯಕ್ಕೆ ಕೈ ಹಾಕುವುದಿಲ್ಲ’ ಎಂದು ಹೇಳಿದ್ದಾರೆ. ವಿಶೇಷವಾಗಿ ‘ಕಲೆಕ್ಟಿವ್ ಆರ್ಟಿಸ್ಟ್ ನೆಟ್ವರ್ಕ್ನ ಸಿಇಓ ವಿಜಯ್ ಸುಬ್ರಹ್ಮಣ್ಯಂ ಅವರನ್ನು ಟೀಕೆ ಮಾಡಿರುವ ಅನುರಾಗ್ ಕಶ್ಯಪ್, ‘ಕಲಾವಿದರ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿದ್ದುಕೊಂಡು ಎಐ ಸಿನಿಮಾ ಮಾಡಿರುವ ನಿಮಗೆ ಅಭಿನಂದನೆಗಳು, ಇನ್ನಷ್ಟು ನಿರೀಕ್ಷಿಸುತ್ತೇನೆ’ ಎಂದು ವ್ಯಂಗ್ಯವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
For More Updates Join our WhatsApp Group :