ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿದ್ದನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಾರೆ. ಹಾಗೆಂದು, ಅವರು ಉಪ ಮುಖ್ಯಮಂತ್ರಿಗಳಾಗಿ ಅದನ್ನು ಹಾಡಿದ್ದರೆ ತಕರಾರಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಆರ್ಎಸ್ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ಆರ್ಎಸ್ಎಸ್ ಅನ್ನು ಈ ದೇಶದಲ್ಲಿ ಮೂರು ಬಾರಿ ಈಗಾಗಲೇ ನಿಷೇಧ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಡೆಪ್ಯುಟಿ ಮುಖ್ಯಮಂತ್ರಿಗಳಾಗಿ ಸಂಘದ ಪ್ರಾರ್ಥನೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ. ಯಾಕೆಂದರೆ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ, ಇಡೀ ಏಳು ಕೋಟಿ ಕರ್ನಾಟಕ ಜನತೆಯ ಸರ್ಕಾರ. ಅದರಲ್ಲಿ ಆರ್ಎಸ್ಎಸ್ನವರೂ ಇದ್ದಾರೆ, ಜಮಾಅತ್ ಇಸ್ಲಾಮಿ ಅವರೂ ಇದಾರೆ ಎಲ್ಲರೂ ಇದ್ದಾರೆ. ತಾಲಿಬಾನಿಗಳೂ ಇದ್ದಾರೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಅವರು (ಡಿಕೆಶಿ) ಆ ರೀತಿ ಹೇಳುವಹಾಗೆ ಇಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳಿದ್ದರೆ ಅವರು ಕ್ಷಮೆ ಕೇಳಬೇಕಾಗುತ್ತದೆ. ಯಾಕೆಂದರೆ, ಮಹಾತ್ಮ ಗಾಂಧಿಯವರನ್ನು ಕೊಂದಂತ ಸಂಘಟನೆ ಅದು. ಆ ಸಂಘಟನೆಯ ಪ್ರಾರ್ಥನೆ ಮಾಡುವುದು ಸರಿಯಲ್ಲ ಎಂದರು.
ಡಿಕೆ ಶಿವಕುಮಾರ್ಗೆ ಹಲವು ಮುಖ: ಬಿಕೆ ಹರಿಪ್ರಸಾದ್ ಡಿಕೆ ಶಿವಕುಮಾರ್ಗೆ ಹಲವು ಮುಖಗಳಿವೆ. ಅವರು ಕೃಷಿಕರು ಎಂದು ಹೇಳಿಕೊಳ್ಳುತ್ತಾರೆ. ಆಮೇಲೆ ಒಮ್ಮೊಮ್ಮೆ ಕ್ವಾರಿ ಮಾಲೀಕ, ಎಜುಕೇಷನಿಸ್ಟ್, ಉದ್ಯಮಿ ಎಂದೆಲ್ಲ ಹೇಳಿಕೊಳ್ಳುತ್ತಾರೆ. ಹೀಗಾಗಿ ಯಾರಿಗೆ ಸಂದೇಶ ಕೊಡಬೇಕು ಎಂಬುದನ್ನು ಅವರು ಗಮನದಲ್ಲಿ ಇಟ್ಟುಕೊಂಡಿದ್ದಾರೆ ನಮಗೆ ಗೊತ್ತಿಲ್ಲ. ಯಾರನ್ನು ಮೆಚ್ಚಿಸುವುದಕ್ಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಉಪ ಮುಖ್ಯಮಂತ್ರಿಯಾಗಿ ಹಾಗೆ ಮಾಡಿದ್ದರೆ ನಮ್ಮದೇನೂ ಅಭ್ಯಂತರ ಇಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿದ್ದರೆ ಅವರು ಕ್ಷಮೆ ಕೇಳಬೇಕಾಗುತ್ತದೆ ಎಂದು ಹರಿಪ್ರಸಾದ್ ಹೇಳಿದರು.
For More Updates Join our WhatsApp Group :