ಬೇಡಿದ ವರವ ನೀಡುವ ಮಹಾತಾಯಿ ಹಾಸನಾಂಬೆ ದರ್ಶನ ನಿಯಮ ಬದಲಾವಣೆ…?. | Hassanambe Darshana

ಬೇಡಿದ ವರವ ನೀಡುವ ಮಹಾತಾಯಿ ಹಾಸನಾಂಬೆ ದರ್ಶನ ನಿಯಮ ಬದಲಾವಣೆ...?. | Hassanambe Darshan

ಹಾಸನ: ಅಧಿದೇವತೆ, ಬೇಡಿದ ವರವ ನೀಡುವ ಮಹಾತಾಯಿ ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ಉತ್ಸವಕ್ಕೆ ಇದೀಗ ದಿನಗಣನೆ ಶುರುವಾಗಿದೆ. ಈ ವರ್ಷ ಅಕ್ಟೋಬರ್ 9ರಿಂದ 23ರವರೆಗೆ ಹಾಸನಾಂಬೆ ಉತ್ಸವ ಜರುಗಲಿದೆ. ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದ 13 ದಿನ ಭಕ್ತರಿಗೆ ಹಾಸನಾಂಬೆ ದರುಶನ ಕರುಣಿಸಲಿದ್ದಾಳೆ. ಹೀಗಾಗಿ ಹಾಸನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ದರ್ಶನೋತ್ಸವ ಸಿದ್ಧತೆ ಸಭೆ ನಡೆಯಿತು. ಶಾಸಕರಾದ ಸ್ವರೂಪ್, ಸಿಮೆಂಟ್ ಮಂಜು, ಶಿವಲಿಂಗೇಗೌಡ ಭಾಗಿಯಾಗಿದ್ದರು.

ಭಕ್ತರಿಗೆ ಸಮಯ ನಿಗದಿ ಮಾಡುವಂತೆ ಸಚಿವ ಕೃಷ್ಣಬೈರೇಗೌಡ ಸಲಹೆ

ಸಭೆಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ರಾಜ್ಯದ ಮೂಲೆ ಮೂಲೆಯಿಂದ ಜನರು ಹಾಸನಾಂಬೆ ದರ್ಶನಕ್ಕೆ ಬರುತ್ತಾರೆ. ಆದರೆ ವಿವಿಐಪಿ, ವಿಐಪಿ ಭಕ್ತರ ಕಾರಣದಿಂದ ಜನರಿಗೆ ದರ್ಶನಕ್ಕೆ ಸಮಸ್ಯೆ ಆಗುತ್ತದೆ. ಅವರನ್ನು ಗಂಟೆಗಟ್ಟಲೇ ನಿಲ್ಲಿಸಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ಹಾಗಾಗಿ ಈ ಗಣ್ಯ ಸಂಸ್ಕೃತಿ ತಡೆಯಲು ಸಹಕರಿಸಿ ಎಂದು ಮನವಿ ಮಾಡಿದರು.

ನಾನು ಈ ವಿಐಪಿ ಹಾಗೂ ಶಿಷ್ಟಾಚಾರ ಭಕ್ತರಿಗೆ ಸಮಯ ನಿಗದಿ ಮಾಡಿ ಎಂದು ಹೇಳಿದ್ದೆ. ಗೋಲ್ಡ್ ಕಾರ್ಡ್ಗೆ ಎರಡು ಗಂಟೆ, ಶಿಷ್ಟಾಚಾರಕ್ಕೆ ಎರಡು ಗಂಟೆ ಮಾತ್ರ ಸಮಯ ನಿಗದಿ ಮಾಡಿ ಎಂದು ಸಲಹೆ ನೀಡಲಾಗಿದೆ. ಇದೆಲ್ಲ ಮಾಡಿದರೆ ಜನರಿಗೆ ಅನುಕೂಲ ಆಗುತ್ತೆ ಎನ್ನುವುದಾದರೆ ಈ ಎಲ್ಲಾ ರೀತಿಯ ಬದಲಾವಣೆ ಮಾಡೋಣ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಪಾಸ್ ವ್ಯವಸ್ಥೆ ಸಂಪೂರ್ಣ ರದ್ದು

ಹಾಸನಾಂಬೆ ದೇವಾಲಯದ ಆಡಳಿತ ಮಂಡಳಿ ಅಧಿಕಾರಿ ಮಾರುತಿ ಮಾತನಾಡಿ, ಹಾಸನಾಂಬೆ ಉತ್ಸವ ವೇಳೆ ದರ್ಶನದ ಪಾಸ್ ವ್ಯವಸ್ಥೆ ಸಂಪೂರ್ಣ ರದ್ದು ಮಾಡಲಾಗುವುದು. ಪಾಸ್ ಬದಲು ಗೋಲ್ಡ್ ಕಾರ್ಡ್ ಬಳಕೆ ಇರಲಿದ್ದು, ಒಂದು ಗೋಲ್ಡ್ ಕಾರ್ಡ್ಗೆ ಒಬ್ಬರಿಗೆ ಮಾತ್ರ ದರ್ಶನಕ್ಕೆ ಅವಕಾಶವಿದ್ದು, ಮುಂಜಾನೆ 5ರಿಂದ ದರ್ಶನಕ್ಕೆ ಅವಕಾಶವಿರಲಿದೆ ಎಂದು ತಿಳಿಸಿದರು.

ಉಚಿತ ಪಾಸ್ ಪಡೆದು ದರ್ಶನಕ್ಕೆ ಬರುತ್ತಿದ್ದ ಜನರಿಂದ ಗೊಂದಲವಾಗುತ್ತಿತ್ತು. ಆದ್ದರಿಂದ ಉಚಿತ ಪಾಸ್ ಬದಲು ಕೇವಲ ಗೋಲ್ಡ್ ಕಾರ್ಡ್ ಬಳಕೆ ಮಾಡಲಾಗುವುದು. ಸಿಎಂ, ಡಿಸಿಎಂ, ಸಿಜೆ ಹೊರತುಪಡಿಸಿ ಉಳಿದ ಎಲ್ಲಾ ಗಣ್ಯರಿಗೆ ವೈಯಕ್ತಿಕ ಶಿಷ್ಟಾಚಾರ ಬದಲು ಜಿಲ್ಲಾಡಳಿತ ನಿಯೋಜಿತ ವಾಹನ ಬಳಕೆ ಮಾಡಲಾಗುವುದು. ಕೊನೆಯ 5 ದಿನ ಎಲ್ಲಾ ರೀತಿಯ ಶಿಷ್ಟಾಚಾರ ರದ್ದು ಎಂದು ಹಾಸನಾಂಬೆ ದೇವಾಲಯದ ಆಡಳಿತ ಮಂಡಳಿ ಅಧಿಕಾರಿ ಮಾರುತಿ ಮಾಹಿತಿ ನೀಡಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *