ಶಾರದೀಯ ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ವಿಶೇಷವಾಗಿದೆ. ಬಿಳಿ ಬಣ್ಣದ ಹೂವುಗಳನ್ನು ಉಪಯೋಗಿಸಿ, ಕಲಶ ಸ್ಥಾಪನೆ ಮತ್ತು ಅಷ್ಟದಳ ರಂಗೋಲಿಯಿಂದ ಪೂಜಿಸಲಾಗುತ್ತದೆ. ದೇವಿಯ ತಪಸ್ಸು ಮತ್ತು ಆಕೆಯ ಅಪಾರ ಶಕ್ತಿಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಪೂಜೆಯಿಂದ ಭಕ್ತರಿಗೆ ಶಕ್ತಿ, ಧೈರ್ಯ ಮತ್ತು ದೈವಿಕ ಅನುಗ್ರಹ ದೊರೆಯುತ್ತದೆ ಎಂದು ನಂಬಲಾಗಿದೆ.
ಶಾರದೀಯ ನವರಾತ್ರಿ ಪ್ರಾರಂಭವಾಗಿದೆ. ಈ ಅವಧಿಯಲ್ಲಿ ಪ್ರತಿಯೊಂದು ದಿನವೂ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನದಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ರೂಪವನ್ನು ಆರಾಧಿಸಲಾಗುತ್ತದೆ. ಆಶ್ವಯುಜ ಮಾಸದ ಶುಕ್ಲ ದ್ವಿತೀಯೆಯಂದು ಆರಾಧಿಸಲ್ಪಡುವ ದೇವಿ ಸ್ವರೂಪವೇ ಬ್ರಹ್ಮಚಾರಿಣಿ. ಈ ದಿನದಂದು ಕಲಶ ಸ್ಥಾಪಿಸಿ, ಅಷ್ಟದಳ ರಂಗೋಲಿಯಲ್ಲಿ ದೇವಿಯನ್ನು ಧ್ಯಾನಿಸುತ್ತಾ ಪೂಜಿಸಬೇಕು
ಹಂಸಾರೂಢಾಂ ಶುಕ್ಲವರ್ಣಾಂ ಶುಕ್ಲಮಾಲ್ಯಾದ್ಯಲಂಕೃತಾಂ ಚತುರ್ಭುಜಾಂ ಸೃಕ್ಸ್ರುವೌ ಚ ಕಮಂಡಲ್ವಮಾಲಿಕಾಂ ಬಿಭ್ರೀತಿಂ ಪೂಜಯೇದ್ದೇವಿಂ ದ್ವೀತಿಯಾಯಾಂ ಸದಾ ನೃಪ
ಬ್ರಹ್ಮಚಾರಿಣಿಯ ಸ್ವರೂಪ:
- ವಾಹನ: ಹಂಸ
- ವರ್ಣ: ಬಿಳಿ
- ಅಲಂಕಾರ: ಶುಭ್ರ ಹೂವಿನ ಮಾಲೆಗಳು
ಬ್ರಹ್ಮಚಾರಿಣಿಯ ಆಯುಧಗಳು:
- ಸೃಕ್ ಮತ್ತು ಸೃವ (ಯಜ್ಞೋಪಕರಣಗಳು)
- ಕಮಂಡಲ
- ಜಪಮಾಲೆ
ದೇವಿಯ ತಪಸ್ಸು:
ಪುರಾಣ ಪ್ರಕಾರ ದೇವಿ ಹಿಮಾಲಯನ ಮಗಳಾಗಿ ಜನಿಸಿ, ಶಿವನನ್ನು ಪತಿಯಾಗಿ ಪಡೆಯಲು ನಾರದ ಮುನಿಗಳ ಮಾರ್ಗದರ್ಶನದಲ್ಲಿ ಗಾಢ ತಪಸ್ಸು ಮಾಡಿದಳು. ಮೊದಲ ಸಾವಿರ ವರ್ಷಗಳು ಹಣ್ಣು ಮತ್ತು ಎಲೆಗಳನ್ನು ಸೇವಿಸಿ ತಪಸ್ಸು. ನಂತರದ ಸಾವಿರ ವರ್ಷಗಳು ಒಣ ಬಿಲ್ವಪತ್ರಗಳನ್ನು ಮಾತ್ರ ಸೇವನೆ. ಕೊನೆಯಲ್ಲಿ ಆಹಾರವನ್ನೇ ತ್ಯಜಿಸಿ ತಪಸ್ಸು ಮುಂದುವರಿಸಿದಳು. ಆಹಾರವನ್ನೇ ಬಿಡುವ ಮೂಲಕ ತಪಸ್ಸು ಮಾಡಿದ ಕಾರಣ ಆಕೆಗೆ ಅಪರ್ಣಾ ಎಂಬ ನಾಮ ದೊರಕಿತು.
ದೇವಿಯ ಶಸ್ತ್ರೋಪಕರಣಗಳು:
ಎಲ್ಲ ದೇವತೆಗಳ ಶಕ್ತಿಯ ಸಂಯೋಗದಿಂದ ದೇವಿ ದಿವ್ಯ ಚೈತನ್ಯ ರೂಪದಲ್ಲಿ ಪ್ರಕಟವಾದಳು.
- ಶಿವ – ತ್ರಿಶೂಲ
- ವಿಷ್ಣು – ಚಕ್ರ
- ವರುಣ – ಶಂಖ
- ಅಗ್ನಿ – ಈಟಿ
- ವಾಯು – ಬಿಲ್ಲು ಮತ್ತು ಬಾಣಗಳು
- ಇಂದ್ರ – ವಜ್ರಾಯುಧ, ಗಂಟೆ, ಜಪಮಾಲೆ, ಕಮಂಡಲ
- ಸೂರ್ಯ – ಕಿರಣಗಳು
- ಕಾಲ – ಖಡ್ಗ
- ಸಮುದ್ರ – ಆಭರಣಗಳು
- ವಿಶ್ವಕರ್ಮ – ಕೊಡಲಿ
- ಹಿಮವಂತ – ಸಿಂಹವನ್ನು ವಾಹನವಾಗಿ
- ಕುಬೇರ ಮತ್ತು ಸರ್ಪರಾಜರು – ಆಭರಣಗಳು
ಎಲ್ಲ ಶಕ್ತಿಗಳ ಸಂಯೋಗದಿಂದ ದೇವಿ ಸಿಂಹವಾಹಿನಿಯಾಗಿ, ಸರ್ವಾಯುಧಧಾರಿಣಿಯಾಗಿ, ಭೀಕರ ನಾದದಿಂದ ಲೋಕಗಳನ್ನು ನಡುಗಿಸಿದಳು.
ಪೂಜಾ ವಿಧಾನ:
- ಬೆಳಿಗ್ಗೆ ಸ್ನಾನಾದಿ ಶುದ್ಧಿ ನಂತರ ಅಷ್ಟದಳ ರಂಗೋಲಿ ಹಾಕಿ ಕಲಶ ಸ್ಥಾಪಿಸಬೇಕು.
- ಕಲಶದಲ್ಲಿ ಗಂಧ–ಜಲ ತುಂಬಿ ದೇವಿಯನ್ನು ಆವಾಹನೆ ಮಾಡಬೇಕು.
- ಬಿಳಿ ಬಣ್ಣದ ಹೂಗಳನ್ನು ಉಪಯೋಗಿಸಿ ಪೂಜೆ ಮಾಡುವುದು ಶ್ರೇಷ್ಠ.
- ಸಂಜೆಯ ವೇಳೆಯಲ್ಲಿ ಮುತೆದೆಯರಿಗೆ ಅರಿಶಿನ–ಕುಂಕುಮ ಅಥವಾ ಬಾಗಿನ ನೀಡುವುದರಿಂದ ಪೂರ್ಣಫಲ ದೊರೆಯುತ್ತದೆ.
ಆರಾಧನೆಯ ಫಲ:
ದುರ್ಬಲರಿಗೆ ಶಕ್ತಿ ದೊರೆಯುತ್ತದೆ. ಯಾರ ಸಹಾಯವೂ ಸಿಗದೆ ಸಂಕಟದಲ್ಲಿರುವವರಿಗೆ ಅಗತ್ಯ ನೆರವು ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ನಿರೀಕ್ಷೆಯ ಹೊರಗಿನ ರಕ್ಷಣಾ ಶಕ್ತಿ ದೊರೆಯುತ್ತದೆ. ಬ್ರಹ್ಮಚಾರಿಣಿ ಸ್ವರೂಪಿಣಿ ಆರಾಧನೆಯಿಂದ ಭಕ್ತರ ಜೀವನದಲ್ಲಿ ಶಕ್ತಿ, ಧೈರ್ಯ ಮತ್ತು ದೈವೀ ಅನುಗ್ರಹವು ತುಂಬಿ ಹರಿಯುತ್ತದೆ.
For More Updates Join our WhatsApp Group :




