ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಇನ್ನೂ ಕ್ವಾರೆಂಟೈನ್ ಸೆಲ್ನಲ್ಲಿಯೇ ಇದ್ದಾರೆ. ಸಾಮಾನ್ಯ ಸೆಲ್ಗೆ ಶಿಫ್ಟ್ ಮಾಡುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿಕೊಂಡಿದ್ದಾರೆ. ವಾಕಿಂಗ್ ಮಾಡುವ ಜಾಗದಲ್ಲಿ ಸೂರ್ಯನ ಬೆಳಕು ಇಲ್ಲ ಎಂದು ವಿಚಾರಣೆ ವೇಳೆ ದರ್ಶನ್ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ದರ್ಶನ್, ಪವಿತ್ರಾ ಗೌಡ ಮುಂತಾದ ಪ್ರಮುಖ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇಂದು (ಸೆಪ್ಟೆಂಬರ್ 25) ಸಿಸಿಹೆಚ್-57ನೇ ಕೋರ್ಟ್ಗೆ ಆರೋಪಿಗಳು ಹಾಜರಾಗಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ಈ ವೇಳೆ ಜಡ್ಜ್ ಎದುರು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ದರ್ಶನ್ ಅವರು ಬಿಳಿ ಬಣ್ಣದ ಜಾಕೆಟ್ ಧರಿಸಿದ್ದರು. ಉಳಿದ ಆರೋಪಿಗಳಾದ ಪುಟ್ಟಸ್ವಾಮಿ, ರಾಘವೇಂದ್ರ, ಧನರಾಜ್, ವಿನಯ್ ಕಾರ್ತಿಕ್, ಕೇಶವ ಮೂರ್ತಿ, ನಿಖಿಲ್ ನಾಯಕ್ ಕೋರ್ಟ್ಗೆ ಖುದ್ದು ಹಾಜರಾಗಿದ್ದಾರೆ. ಆರೋಪಿ ನಂದೀಶ್ ನಂದೀಶ್ ಗೈರಾಗಿದ್ದಾನೆ. ಪ್ರಕರಣದಿಂದ ಕೈಬಿಡುವಂತೆ ಕೆಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್ ಪರ ವಕೀಲ ಸುನೀಲ್ ವಾದ ಮಾಡಿದ್ದಾರೆ. ‘ದರ್ಶನ್ ಅವರನ್ನು ಇನ್ನೂ ಕ್ವಾರಂಟೈನ್ನಲ್ಲಿ ಇಟ್ಟಿದ್ದಾರೆ. ಜೈಲಿನ ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಜೈಲಿನಲ್ಲಿರುವ ಆರೋಪಿಗಳಿಗೆ ಕೆಲ ಸಮಸ್ಯೆಗಳಿವೆ’ ಎಂದಿರುವ ವಕೀಲರು, ಆರೋಪಿಗಳ ಸಮಸ್ಯೆ ಬಗ್ಗೆಆಲಿಸುವಂತೆ ಕೋರ್ಟ್ಗೆ ಮನವಿ ಮಾಡಿದ್ದಾರೆ. ಕ್ವಾರಂಟೈನ್ ಸೆಲ್ನಿಂದ ಸಾಮಾನ್ಯ ಸೆಲ್ಗೆ ಆರೋಪಿಗಳನ್ನು ಶಿಫ್ಟ್ ಮಾಡುವಂತೆ ಇತರೆ ಆರೋಪಿಗಳ ಪರ ವಕೀಲರು ಮನವಿ ಸಲ್ಲಿಸಿದ್ದಾರೆ.
ವಿಚಾರಣೆ ವೇಳೆ ದರ್ಶನ್ಗೆ ಜಡ್ಜ್ ಪ್ರಶ್ನೆ ಕೇಳಿದ್ದಾರೆ. ‘ಕೋರ್ಟ್ ಆದೇಶ ಪಾಲಿಸುತ್ತಿದ್ದಾರೆಯೇ?’ ಎಂದು ಕೇಳಿದ ಪ್ರಶ್ನೆಗೆ, ‘ಇಲ್ಲ ಸರ್, ಯಾವ ಆದೇಶಗಳನ್ನೂ ಪಾಲಿಸುತ್ತಿಲ್ಲ. 25/3 ಫೀಟ್ ಮಾತ್ರ ಓಡಾಡಲು ಅವಕಾಶ ಕೊಟ್ಟಿದ್ದಾರೆ. ಅಲ್ಲಿ ವಾಕಿಂಗ್ ಮಾಡಲು ಸೂರ್ಯನ ಬೆಳಕು ಬರುವುದಿಲ್ಲ’ ಎಂದು ದರ್ಶನ್ ಉತ್ತರ ನೀಡಿದ್ದಾರೆ.
ಜೈಲು ಅಧಿಕಾರಿಗಳ ವಿರುದ್ದ ದರ್ಶನ್ ಪರ ವಕೀಲರು ಆರೋಪ ಮಾಡಿದ್ದಾರೆ. ‘20 ಬಾರಿ ಕೋರ್ಟ್ ಆರ್ಡರ್ ಕೇಳುತ್ತಾರೆ. ಗುಂಡಾ ರಾಜ್ಯವೇ ಇದು? ಕೋರ್ಟ್ ಆರ್ಡರ್ಗೂ ಮಾನ್ಯತೆ ನೀಡುತ್ತಿಲ್ಲ’ ಎಂದು ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದಾರೆ. ಜೈಲಿನ ಸೂಪರಿಂಟೆಂಡೆಂಟ್ ಹಾಜರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅಕ್ಟೋಬರ್ 9ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
For More Updates Join our WhatsApp Group :
