ಭೀಮಾ ನದಿಯ ಭೋರ್ಗರೆತಕ್ಕೆ ಕಲ್ಯಾಣ ಕರ್ನಾಟಕ ತತ್ತರ! CM ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ.

ಭೀಮಾ ನದಿಯ ಭೋರ್ಗರೆತಕ್ಕೆ ಕಲ್ಯಾಣ ಕರ್ನಾಟಕ ತತ್ತರ! CM ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ.

ಬೆಂಗಳೂರು:  ಭೀಮಾ, ಕೃಷ್ಣಾ ನದಿ ಅಬ್ಬರಕ್ಕೆ ಕಲ್ಯಾಣ ಕರ್ನಾಟಕ ತತ್ತರಿಸಿ ಹೋಗಿದೆ. ಜನರ ಬದುಕು ಪ್ರವಾಹದಿಂದ ಬೀದಿಗೆ ಬಿದ್ದಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಪ್ರವಾಹ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಬೀದರ್, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡಿದ್ದಾರೆ.

ಪ್ರವಾಹಾರ್ಭಟಕ್ಕೆ ನಲುಗಿದ ಕಲ್ಯಾಣ ಕರ್ನಾಟಕ:

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಖೇಡಗಿ ಗ್ರಾಮಕ್ಕೆ ಪ್ರವಾಹ ನುಗ್ಗಿದೆ. 30ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಆಂಜನೇಯ ಸ್ವಾಮಿ ದೇಗುಲ, ಲಾಲ್​ಸಾಬ್ ದರ್ಗಾ, ಬಸವಣ್ಣ ದೇವಸ್ಥಾನಗಳು ಜಲಾವೃತವಾಗಿವೆ. ಜನರು ತೆಪ್ಪದಲ್ಲೇ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಭೀಮಾನದಿ ಆರ್ಭಟಕ್ಕೆ ಭೀಕರ ಪ್ರವಾಹ ಉಂಟಾಗಿದ್ದು, ಇಡೀ ಬಸವೇಶ್ವರ ಮಠ ಜಲಾವೃತವಾಗಿದೆ. ಕುತ್ತಿಗೆವರೆಗೂ ನೀರು ಬಂದರೂ ಕಾಂತಯ್ಯ ಎಂಬುವವರು ಈಜಿಕೊಂಡು ಹೋಗಿ ಪೂಜೆ ಸಲ್ಲಿಸಿದ್ದಾರೆ. ಪ್ರವಾಹ ಇದ್ದರೂ ಮಠದಲ್ಲಿ ಪೂಜೆ ನಿಲ್ಲಿಸಲ್ಲ ಎಂದು ಹೇಳಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರದ ರೋಜಾ ಗ್ರಾಮ ಪ್ರವಾಹದಿಂದ ನಡುಗಡ್ಡೆಯಾಗಿದ್ದು, ಮೂಕ ಪ್ರಾಣಿಗಳ ರೋದನೆ ಹೇಳತೀರದಾಗಿದೆ. ಜಾನುವಾರಗಳಿಗೆ ತಿನ್ನಲು ಮೇವು ಇಲ್ಲದೆ ಜನ ಪರದಾಡುತ್ತಿದ್ದಾರೆ. ಬೋಟ್​ನಲ್ಲಿ ಮೇವು ತರುವ ಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಗೆ ರಾಯಚೂರಿನಲ್ಲೂ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಹತ್ತಿ ಬೆಳೆ ನಾಶವಾಗಿದೆ. ಎಕರೆಗೆ 20-30 ಸಾವಿರ ಖರ್ಚು ಮಾಡಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಘಟಪ್ರಭಾ ಅಬ್ಬರಕ್ಕೆ ಸಂಕಷ್ಟಗಳ ಪ್ರವಾಹ ಉಂಟಾಗಿದೆ. ಹುಕ್ಕೇರಿ ತಾಲೂಕಿನ ಜಿನ್ರಾಳದಲ್ಲಿ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ಮೆಕ್ಕೆಜೋಳ, ಕಬ್ಬು ಬೆಳೆಗಳು ಸರ್ವನಾಶವಾಗಿವೆ. ಕಷ್ಟಪಟ್ಟು ಬೆಳೆದಿದ್ದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.

 ರಾಜಕೀಯ ನಾಯಕರ ನಡುವೆ ವಾಗ್ಯುದ್ಧ

ಸಿಎಂ ವೈಮಾನಿಕ ಸಮೀಕ್ಷೆಗೆ ಬಿಜೆಪಿ ವ್ಯಂಗ್ಯವಾಡಿದೆ. ವಿಪಕ್ಷ ನಾಯಕ ಆರ್. ಅಶೋಕ್, ನೀವು ಜನ ಘೇರಾವ್ ಆಗುತ್ತಾರೆಂಬ ಭೀತಿಯಿಂದ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪರಿಹಾರ ಘೋಷಿಸಿ ಸಮೀಕ್ಷೆಗೆ ಬರಬೇಕಿತ್ತು ಎಂದಿದ್ದಾರೆ. ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದೊಂದು ಮುಟ್ಟಾಳರ ಸರ್ಕಾರ ಎಂದು ಕರೆದಿದ್ದಾರೆ. ಈ ಮಾತಿಗೆ ಗರಂ ಆಗಿರುವ ಸಚಿವ ಎಂ.ಬಿ. ಪಾಟೀಲ್, ಅವರೇ ಮುಟ್ಟಾಳರು ನಮಗೇನು ಹೇಳುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ವಿಜಯೇಂದ್ರ ವಾಗ್ದಾಳಿ ಇಷ್ಟಕ್ಕೆ ನಿಲ್ಲದೇ ಯಡಿಯೂರಪ್ಪ ಏಕಾಂಗಿಯಾಗಿ ಪ್ರವಾಹ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರು ಎಂದು ಹೇಳಿದ್ದಾರೆ. ಈ ಮಾತಿಗೆ ತಿರುಗೇಟು ಕೊಟ್ಟ ಸಚಿವ  ಪ್ರಿಯಾಂಕ್ ಖರ್ಗೆ, ನಿಮ್ಮ ಪೂಜ್ಯ ತಂದೆ ವಿಮಾನ ನಿಲ್ದಾಣದಿಂದ ಹೊರಗೆ ಬಂದಿರಲಿಲ್ಲ ಎಂದು ಕಾಲೆಳೆದಿದ್ದಾರೆ. ಸಚಿವ ಎಂ.ಬಿ. ಪಾಟೀಲ್ ಕೇಂದ್ರದ ಜವಾಬ್ದಾರಿ ಹೆಚ್ಚಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕರ ಮಾತುಗಳಿಗೆ ಹೆಚ್​ಡಿಕೆ ಕೌಂಟರ್ ಕೊಟ್ಟಿದ್ದಾರೆ. ಕೇಂದ್ರಕ್ಕೆ ಯಾರಾದರೂ ಮನವಿ ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಜನರು ಪ್ರವಾಹಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ರಾಜಕೀಯ ನಾಯಕರುಗಳ ಆರೋಪ-ಪ್ರತ್ಯಾರೋಪಗಳ ಪಟ್ಟಿ ಬೆಳೆಯುತ್ತಲೇ ಇದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *