ಕಪಿಲ್ ಶರ್ಮಾ ಭಾರತದ ಬಲು ಜನಪ್ರಿಯ ಸೆಲೆಬ್ರಿಟಿ. ಭಾರತದ ಅತ್ಯಂತ ಶ್ರೀಮಂತ ಕಮಿಡಿಯನ್. ಟಿವಿ ಲೋಕದ ತಾರೆ. ಇದೆಲ್ಲದರ ಜೊತೆಗೆ ಅವರು ಉದ್ಯಮಿಯೂ ಹೌದು. ರಿಯಲ್ ಎಸ್ಟೇಟ್ ಹೂಡಿಕೆ ಮತ್ತು ಹೋಟೆಲ್ ಬ್ಯುಸಿನೆಸ್ಗಳಲ್ಲಿಯೂ ಸಹ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಪಿಲ್ ಶರ್ಮಾ ಅವರು ಪಂಜಾಬಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕೆನಡಾನಲ್ಲಿ ತಮ್ಮ ರೆಸ್ಟೊರೆಂಟ್ ತೆರೆದಿದ್ದರು. ಆದರೆ ಇತ್ತೀಚೆಗೆ ಭೂಗತ ಪಾತಕಿಗಳು ರೆಸ್ಟೊರೆಂಟ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಅದೂ ಬರೋಬ್ಬರಿ ಮೂರನೇ ಬಾರಿ ರೆಸ್ಟೊರೆಂಟ್ ಗುಂಡಿನ ದಾಳಿಗೆ ಈಡಾಗಿದೆ.
ಕೆನಡಾದ ಸರ್ರೆಯ ನ್ಯೂ ಟೌನ್ ಏರಿಯಾನಲ್ಲಿ ಕಪಿಲ್ ಶರ್ಮಾ ಅವರ ಮಾಲಿಕತ್ವದ ರೆಸ್ಟೊರೆಂಟ್ ಒಂದು ಕಾರ್ಯ ನಿರ್ವಹಿಸುತ್ತಿದೆ. ಗುರುವಾರ ರಾತ್ರಿ ಈ ರೆಸ್ಟೊರೆಂಟ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಲ್ಲಿನ ಕಾಲಮಾನ 3:45ರ ಸುಮಾರಿಗೆ ಕೆಲ ಅಗಂತುಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಯಾರಿಗೂ ಹಾನಿ ಆಗಿಲ್ಲ ಆದರೆ ರೆಸ್ಟೊರೆಂಟ್ನ ಗಾಜಿಗೆ ಹಾನಿ ಆಗಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ಗೆ ಸೇರಿದ ಕುಲ್ವೀರ್ ಸಿಧು ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಗುಂಡಿನ ದಾಳಿ ಮಾಡಿದ ವ್ಯಕ್ತಿ ಅದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಸಹ ಹಂಚಿಕೊಂಡಿದ್ದಾನೆ.
ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಕಾರಿನ ಕಿಟಕಿಯಿಂದ ಕೈ ಹೊರಗೆ ಚಾಚಿ ಹಲವಾರು ಬಾರಿ ರೆಸ್ಟೊರಂಟ್ನತ್ತ ಗುಂಡು ಹಾರಿಸುವ ದೃಶ್ಯ ವಿಡಿಯೋನಲ್ಲಿ ಸೆರೆಯಾಗಿದೆ. ವ್ಯಕ್ತಿ ಗುಂಡು ಹಾರಿಸುತ್ತಿದ್ದಂತೆ ರೆಸ್ಟೊರೆಂಟ್ನ ಕಿಟಕಿ, ಬಾಗಿಲಿನ ಗಾಜುಗಳೆಲ್ಲ ಪುಡಿಯಾಗಿ ಕೆಳಗೆ ಉರುಳಿವೆ. ಈ ಘಟನೆ ನಡೆದ ಸಂದರ್ಭದಲ್ಲಿ ರೆಸ್ಟೊರೆಂಟ್ನ ಸಿಬ್ಬಂದಿ ಒಳಗೆ ಇದ್ದರು ಆದರೆ ಯಾರಿಗೂ ಸಹ ಯಾವುದೇ ರೀತಿಯ ಹಾನಿ ಆಗಿಲ್ಲ ಎನ್ನಲಾಗುತ್ತಿದೆ. ಘಟನೆ ಕುರಿತಾಗಿ ಕಪಿಲ್ ಶರ್ಮಾ ಈ ವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸ್ಥಳೀಯ ಪೊಲೀಸರು ಘಟನೆ ಕುರಿತಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಕಪಿಲ್ ಶರ್ಮಾ ಅವರ ಕೆಫೆ ಮೇಲೆ ದಾಳಿ ಆಗುತ್ತಿರುವುದು ಇದು ಮೂರನೇ ಬಾರಿ. ಮೊದಲಿಗೆ ಇದೇ ವರ್ಷ ಜುಲೈ 9 ರಂದು ದಾಳಿ ಮಾಡಲಾಗಿತ್ತು. ಅದಾದ ಬಳಿಕ ಆಗಸ್ಟ್ 7 ರಂದು ದಾಳಿ ಮಾಡಲಾಯ್ತು. ಈಗ ಅಕ್ಟೋಬರ್ 16 ರಂದು ದಾಳಿ ಮಾಡಲಾಗಿದೆ. ಗೋಲ್ಡಿ ಬ್ರಾರ್, ಲಾರೆನ್ಸ್ ಬಿಷ್ಣೋಯಿ ಇನ್ನಿತರೆ ಭೂಗತ ಪಾತಕಿಗಳ ಗ್ಯಾಂಗ್ಗಳು ಕೆನಡಾ ಅನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿದ್ದು ತಾವು ಕೇಳಿದಷ್ಟು ಹಣ ಕೊಡದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಈ ರೀತಿಯ ಬೆದರಿಕೆ ದಾಳಿಗಳನ್ನು ಮಾಡುತ್ತಿರುತ್ತಾರೆ. ಈ ಭೂಗತ ಪಾತಕಿಗಳು ಕೆನಡಾದ ಇತರೆ ಕೆಲವು ಪಂಜಾಬಿನ ಉದ್ಯಮಿಗಳು, ಜನಪ್ರಿಯ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ.
For More Updates Join our WhatsApp Group :
