ಬೆಂಗಳೂರು: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರದ ಮಟ್ಟಿಗೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳ ಬಹುತೇಕ ಕಡೆ, ಉತ್ತರ ಒಳನಾಡು ಜಿಲ್ಲೆಗಳ ಕೆಲವು ಕಡೆ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳ ಹಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಹವಾಮಾನ ತಜ್ಞ ಬದರಿನಾಥ್ ಮಾಹತಿ ನೀಡಿದ್ದು, ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಹವಾಮಾನದಲ್ಲಿ ಬದಲಾವಣೆ ಆಗಿದೆ. ಅ. 27 ರಂದು ಭಾರೀ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಸಹಜವಾಗಿದ್ದು, ಹಗುರದಿಂದ ಸಾಧಾರಣ ಮಳೆ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಇದು ನಗರದ ಕೆಲವು ವ್ಯಾಪಾರ ವಹಿವಾಟುಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳಿಗಂತೂ ವ್ಯಾಪಾರವಿಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸಾವಿರಾರು ರೂಪಾಯಿ ಬಂಡವಾಳ ಹಾಕಿರುವವರಿಗೂ, ಗ್ರಾಹಕರು ಅಂಗಡಿಗಳತ್ತ ಮುಖ ಮಾಡುತ್ತಿಲ್ಲ ಎಂಬ ಚಿಂತೆ ಕಾಡತೊಡಗಿದೆ. ಹೀಗೆಯೇ ಮಳೆ ಮುಂದುವರೆದರೆ ಕಷ್ಟ ಎಂದು ಬೀದಿ ಬದಿ ವ್ಯಾಪಾರಿಗಳು ಗೋಗರೆದಿದ್ದಾರೆ.
ಅಕ್ಟೋಬರ್ 24 ರಿಂದ ನವೆಂಬರ್ 2 ರವರೆಗೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕೆಲವೊಮ್ಮೆ ವ್ಯಾಪಕವಾಗಿ ಹಾಗೂ ಕೆಲವೊಮ್ಮೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಅಕ್ಟೋಬರ್ 28 ರಂದು ಅಲ್ಲಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಎಕ್ಸ್ ಸಂದೇಶದಲ್ಲಿ ತಿಳಿಸಿದೆ.
ಬೆಂಗಳೂರಿಗೆ ಅ. 25 ಹಾಗೂ 26 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಿಗೆ ಅ. 26 ರಂದು ಯೆಲ್ಲೋ ಹಾಗೂ 27 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಒಟ್ಟಿನಲ್ಲಿ, ಮುಂದಿನ ಏಳು ದಿನಗಳ ಕಾಲ ಕರ್ನಾಟಕದ ವಿವಿಧೆಡೆ ವರ್ಷಧಾರೆ ಬಹುತೇಕ ಖಚಿತ ಎಂಬ ಸುಳಿವನ್ನು ಹವಾಮಾನ ಇಲಾಖೆ ನೀಡಿದೆ.
For More Updates Join our WhatsApp Group :
