ರಾಣಾ ದಗ್ಗುಬಾಟಿ ತೆಲುಗು ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ‘ಬಾಹುಬಲಿ’ ಸಿನಿಮಾದ ಅವರ ಬಲ್ಲಾಳದೇವ ಪಾತ್ರ ಮರೆಯಲಾಗದು. ನಟರಾಗಿರುವ ರಾಣಾ ದಗ್ಗುಬಾಟಿ ಒಳ್ಳೆಯ ಉದ್ಯಮಿಯೂ ಹೌದು. ನಟನಾಗುವ ಮುಂಚೆಯೇ ಸ್ಪಿರಿಟ್ ಹೆಸರಿನ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದ ರಾಣಾ ದಗ್ಗುಬಾಟಿ, ವಿಎಫ್ಎಕ್ಸ್ ಸ್ಟುಡಿಯೋ ಸಹ ಪ್ರಾರಂಭಿಸಿದ್ದರು. ನಟನೆ ಜೊತೆಗೆ ಸಿನಿಮಾದ ಹಲವು ವಿಭಾಗಗಳ ಉದ್ಯಮ ಹೊಂದಿರುವ ರಾಣಾ ದಗ್ಗುಬಾಟಿ ಇದೀಗ ಬಾಲಿವುಡ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ರಾಮಾ ನಾಯ್ಡು ಸ್ಟುಡಿಯೋದ ಉದ್ಯಮ, ನಿರ್ಮಾಣ ಕಾರ್ಯಗಳನ್ನು ನೋಡಿಕೊಳ್ಳುತ್ತಲೇ ತಮ್ಮ ಸ್ಪಿರಿಟ್ ಮೀಡಿಯಾ ಸಂಸ್ಥೆಯಿಂದಲೂ ಸಿನಿಮಾ ನಿರ್ಮಾಣವನ್ನು ರಾಣಾ ದಗ್ಗುಬಾಟಿ ಆರಂಭಿಸಿದ್ದಾರೆ. ದುಲ್ಕರ್ ಸಲ್ಮಾನ್ ನಟನೆಯ ‘ಕಾಂತಾ’ ಹೆಸರಿನ ಸಿನಿಮಾ ಅನ್ನು ರಾಣಾ ದಗ್ಗುಬಾಟಿ ನಿರ್ಮಾಣ ಮಾಡುತ್ತಿದ್ದಾರೆ. ‘ಕಾಂತಾ’ ಸಿನಿಮಾ ಬಿಡುಗಡೆಗೆ ಮುಂಚೆಯೇ ರಾಣಾ ದಗ್ಗುಬಾಟಿ ಸ್ಟಿರಿಟ್ ಮೀಡಿಯಾದ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ.
ರಾಣಾ ದಗ್ಗುಬಾಟಿ ಈಗಾಗಲೇ ಹಲವು ಬಾಲಿವುಡ್ ಸಿನಿಮಾಗಳಲ್ಲಿ ತಮ್ಮನ್ನು ಉದ್ಯಮಿಯಾಗಿ ತೊಡಗಿಸಿಕೊಂಡಿದ್ದಾರೆ. ವಿತರಣೆ, ಪ್ರಚಾರ ಇನ್ನೂ ಕೆಲವು ಕಾರ್ಯಗಳಲ್ಲಿ ರಾಣಾ ದಗ್ಗುಬಾಟಿ ಹಿಂದಿಯ ಸಾಕಷ್ಟು ಪ್ರಾಜೆಕ್ಟ್ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ರಾಣಾ ದಗ್ಗುಬಾಟಿ ಸಿನಿಮಾ ನಿರ್ಮಾಪಕರಾಗಿ ಹಿಂದಿಗೆ ಎಂಟ್ರಿ ನೀಡಿದ್ದಾರೆ. ರಾಣಾ ದಗ್ಗುಬಾಟಿ ಬಾಲಿವುಡ್ ಸಿನಿಮಾ ನಿರ್ಮಿಸಲಿದ್ದು, ವಿಶೇಷವೆಂದರೆ ಈ ಸಿನಿಮಾ ಕಾದಂಬರಿ ಆಧರಿತ ಸಿನಿಮಾ ಆಗಿರಲಿದೆ.
ಬೂಕರ್ ಪ್ರಶಸ್ತಿ ವಿಜೇತ ಕರ್ನಾಟಕ ಮೂಲದ ಕಾದಂಬರಿಕಾರ ಅರವಿಂದ್ ಅಡಿಗ ಅವರು ಬರೆದಿರುವ ‘ಲಾಸ್ಟ್ ಮ್ಯಾನ್ ಇನ್ ಟವರ್’ ಕಾದಂಬರಿಯನ್ನು ಸಿನಿಮಾ ಮಾಡಲು ರಾಣಾ ದಗ್ಗುಬಾಟಿ ಮುಂದಾಗಿದ್ದು, ಈ ಸಿನಿಮಾಕ್ಕೆ ಬಾಲಿವುಡ್ನ ಪ್ರತಿಭಾವಂತ ನಟ ಮನೋಜ್ ಬಾಜಪೇಯಿ ಅವರನ್ನು ನಟರನ್ನಾಗಿ ಆಯ್ಕೆ ಮಾಡಲಾಗಿದೆ. ಎಂಥಹದ್ದೇ ಪಾತ್ರಕ್ಕೂ ಜೀವ ತುಂಬಬಲ್ಲ ನಟರಾಗಿರುವ ಮನೋಜ್ ಅವರ ಬಗ್ಗೆ ರಾಣಾ ಈ ಹಿಂದೆಯೂ ಅಭಿಮಾನ ವ್ಯಕ್ತಪಡಿಸಿದ್ದರು. ಇದೀಗ ತಮ್ಮ ಮೊದಲ ಬಾಲಿವುಡ್ ಸಿನಿಮಾಕ್ಕೆ ಮನೋಜ್ ಅವರನ್ನು ನಟರನ್ನಾಗಿ ಆಯ್ಕೆ ಮಾಡಿದ್ದಾರೆ.
For More Updates Join our WhatsApp Group :




