ಜನವರಿಯಲ್ಲಿ ಭಾರತದ ಗಗನಯಾನ ಮಿಷನ್: ಮಾನವರಹಿತ ಪ್ರಯಾಣಕ್ಕೆ “ವ್ಯೋಮಿತ್ರ” ಸಿದ್ಧ.

ಜನವರಿಯಲ್ಲಿ ಭಾರತದ ಗಗನಯಾನ ಮಿಷನ್: ಮಾನವರಹಿತ ಪ್ರಯಾಣಕ್ಕೆ “ವ್ಯೋಮಿತ್ರ” ಸಿದ್ಧ.

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಆರಂಭ ತುಸು ವಿಳಂಬವಾಗಲಿದೆ. ಈ ವರ್ಷದೊಳಗೆ ಗಗನಯಾನ ಮಿಷನ್ ಚಾಲನೆಗೊಳ್ಳಬೇಕೆಂದು ಮೊದಲಿಗೆ ಗುರಿ ಇಡಲಾಗಿತ್ತು. ಬೇರೆ ಬೇರೆ ಕಾರಣಗಳಿಗೆ ತುಸು ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇಸ್ರೋ ಛೇರ್ಮನ್ ವಿ ನಾರಾಯಣನ್ ಅವರು ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ಜನವರಿಯಲ್ಲಿ (2026) ಗಗನಯಾನ ಮಿಷನ್​ನಲ್ಲಿ ಮೊದಲ ಸ್ಪೇಸ್​ಫ್ಲೈಟ್ ಹಾರಬಹುದು.

ಅಮೆರಿಕದ ನಾಸಾ ಸಂಸ್ಥೆ ಬಾಹ್ಯಾಕಾಶದಲ್ಲಿ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್​ಎಸ್) ಅನ್ನು ನಿರ್ಮಿಸಿದ ರೀತಿಯಲ್ಲಿ ಭಾರತವೂ ಕೂಡ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ (ಭಾರತೀಯ ಅಂತರಿಕ್ಷ ನಿಲ್ದಾಣ) ನಿರ್ಮಿಸುವ ಯೋಜನೆಯನ್ನು 2028ಕ್ಕೆ ಆರಂಭಿಸುವ ನಿರೀಕ್ಷೆ ಇದೆ. 2027ಕ್ಕೆ ಮಾನವಸಹಿತ ಗಗನಯಾನ ಯೋಜನೆಯನ್ನು ನಡೆಸುವ ಗುರಿ ಇಟ್ಟಿದೆ. ಅಷ್ಟರೊಳಗೆ ಮಾನವರಹಿತವಾದ  ಮೂರು ಸ್ಪೇಸ್​ಫ್ಲೈಟ್ ಕೈಗೊಳ್ಳಲಾಗುತ್ತದೆ.

2027ಕ್ಕೆ ಗಗನಯಾನದಲ್ಲಿ ಮನುಷ್ಯರನ್ನು ಕಳುಹಿಸುವ ಮುನ್ನ ಈ ಮೂರೂ ಮಾನವರಹಿತ ಮಿಷನ್ ಪೂರ್ಣಗೊಳಿಸಲಾಗುತ್ತದೆ. ಅದಕ್ಕಾಗಿ, ವ್ಯೋಮಿತ್ರ ಎನ್ನುವ ಮಾನವ ರೂಪದ ರೋಬೋವನ್ನು ನಿರ್ಮಿಸಲಾಗಿದೆ. ಈ ಮೂರೂ ಮಿಷನ್​ಗಳಲ್ಲಿ ವ್ಯೋಮಿತ್ರ ಪ್ರಯಾಣಿಸಲಿದ್ದು, ಬಾಹ್ಯಾಕಾಶದಲ್ಲಿ ಮನುಷ್ಯರ ಇರುವಿಕೆಗೆ ಇಷ್ಟ ಕಷ್ಟವಾಗುವ ಅಂಶಗಳೇನು ಎಂಬುದನ್ನು ಈ ವ್ಯೋಮಿತ್ರ ಸಹಾಯದಿಂದ ವಿವಿಧ ಪ್ರಯೋಗಗಳ ಮೂಲಕ ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮನುಷ್ಯರ ಪ್ರಯಾಣ ನೂರಕ್ಕೆ ನೂರು ಸುರಕ್ಷಿತ ಎಂಬುದು ಖಾತ್​ರಿಯಾದ ಬಳಿಕವಷ್ಟೇ ಮಾನವಸಹಿತ ಗಗನಯಾನ ಮಿಷನ್ ಕೈಗೊಳ್ಳಲಾಗುತ್ತದೆ.

ಇಸ್ರೋ ಛೇರ್ಮನ್ ವಿ ನಾರಾಯಣನ್ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ, ಗಗನಯಾನ ಮಿಷನ್​ನ ಭಾಗವಾಗಿ 8,000ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲಾ ಅಗತ್ಯ ತಯಾರಿ ನಡೆಯುತ್ತಿದೆ. ಗಗನನೌಕೆಗೆ ಬೇಕಾದ ಎಲ್ಲಾ ಹಾರ್ಡ್​ವೇರ್ ಭಾಗಗಳು ಸತೀಶ್ ಧವನ್ ಸ್ಪೇಸ್ ಸೆಂಟರ್​ನಲ್ಲಿ ತಲುಪಿವೆ. ಅವುಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.

ಮೊದಲ ಮಾನವರಹಿತ ಗಗನಯಾನ್ ಮಿಷನ್ ಡಿಸೆಂಬರ್​ನಲ್ಲಿ ಶುರುವಾಗಬೇಕಿತ್ತು. ಇದರ ಬದಲು ಜನವರಿಯಲ್ಲಿ ಶುರುವಾಗಿ ಮಾರ್ಚ್ ಅಥವಾ ಏಪ್ರಿಲ್​ವರೆಗೂ ಮಿಷನ್ ಇರುತ್ತದೆ. ಅದಕ್ಕೆ ಜಿ1 ಮಿಷನ್ ಎಂದು ಹೆಸರಿಡಲಾಗಿದೆ. ಅದಾದ ಬಳಿಕ ಜಿ2 ಮತ್ತು ಜಿ3 ಮಿಷನ್ ನಡೆಯುತ್ತವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *