ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಪಡೆಯಲು ನಕಲಿ ವೈದ್ಯಕೀಯ ದಾಖಲೆಗಳನ್ನು ನೀಡಿರುವ ಆರೋಪದ ಮೇಲೆ 59 ವರ್ಷದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಆರೋಪಿಯನ್ನು ಬೆಂಗಳೂರಿನ ನೆಲಮಂಗಲದ ಜಿ ಧನಂಜಯ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಪೊಲೀಸರು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಹಣಕಾಸಿನ ನೆರವು ನೀಡುವುದಾಗಿ ಹೇಳಿ ಅವರಿಂದ ನಕಲಿ ಆಸ್ಪತ್ರೆ ಬಿಲ್ಗಳು ಮತ್ತು ವೈದ್ಯಕೀಯ ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಧನಂಜಯ ಅವರು ಶಿಕ್ಷಕರಾಗಿದ್ದು, ಯಶವಂತಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ವಿವರಗಳನ್ನು ಸಂಗ್ರಹಿಸಿ, ಅವರ ಮಾಹಿತಿಯನ್ನು ಬಳಸಿಕೊಂಡು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಹಾರ ಮೊತ್ತವನ್ನು ಪಡೆಯಲು ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣ’ಕ್ಕೆ ಕಳಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಧನಂಜಯ ಒಬ್ಬರೇ ಈ ಕೆಲಸ ಮಾಡಿಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಯಾತಣ್ಣ, ಜಯಮ್ಮ, ಯಶೋದಮ್ಮ ಮತ್ತು ಚಂದ್ರಶೇಖರ್ ಎಂಬುವವರ ಹೆಸರು ಕೂಡ ಈ ತನಿಖೆಯಲ್ಲಿ ಕೇಳಿ ಬಂದಿದೆ. ಇದರಲ್ಲಿ ಕ್ಯಾತಣ್ಣ ಮತ್ತು ಇನ್ನೊಬ್ಬ ಶಂಕಿತ ವ್ಯಕ್ತಿ ನಿಧನರಾದ ನಂತರ ಧನಂಜಯ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿ, ಎರಡನೇ ಬಾರಿಗೆ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
For More Updates Join our WhatsApp Group :
