ಬೆಂಗಳೂರು: ಪೋಕ್ಸೊ ಪ್ರಕರಣಗಳಲ್ಲಿ, ಲೈಂಗಿಕ ದೌರ್ಜನ್ಯ ಅಥವಾ ಅಸುರಕ್ಷಿತ ಲೈಂಗಿಕತೆಯ ನಂತರ ಗರ್ಭಿಣಿಯರಾಗಿ ಮಗುವಿಗೆ ಜನ್ಮ ನೀಡುವ ಹುಡುಗಿಯರು ಶಿಶುವನ್ನು ಕಸದ ಬುಟ್ಟಿಗಳು ಅಥವಾ ಚರಂಡಿಯಲ್ಲಿ ಬಿಟ್ಟುಹೋಗುವುದನ್ನು ತಡೆಯಲು ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆರಂಭಿಸಿದ್ದ ‘ಮಮತೆಯ ತೊಟ್ಟಿಲು’ ಯೋಜನೆ ಒಂದು ವರ್ಷ ಪೂರೈಸಿದೆ. ಇಡೀ ವರ್ಷದಲ್ಲಿ ಒಂದೇ ಮಗುವನ್ನು ‘ಮಮತೆಯ ತೊಟ್ಟಿಲು’ ಮೂಲಕ ಸ್ವೀಕರಿಸಲಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಶಿಶುಗಳಿಗೆ ಆಗುವ ಹಾನಿ, ತೊಂದರೆಗಳನ್ನು ತಪ್ಪಿಸುವುದಕ್ಕಾಗಿ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಮಾಡಲು ಇನ್ನಷ್ಟು ಉಪಕ್ರಮಗಳನ್ನು ಹಮ್ಮಿಕೊಳ್ಳಲು ಮಕ್ಕಳ ರಕ್ಷಣಾ ಘಟಕ ಮುಂದಾಗಿದೆ.
ಮಮತೆಯ ತೊಟ್ಟಿಲು ಎಂದರೇನು?
‘ಮಮತೆಯ ತೊಟ್ಟಿಲು’ ಉಪಕ್ರಮವು ಸರ್ಕಾರದ ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರಂಭಿಸಿರುವ ಯೋಜನೆಯಾಗಿದೆ. ಶಿಶುಗಳನ್ನು ಅಸುರಕ್ಷಿತವಾಗಿ ಪರಿತ್ಯಜಿಸುವುದನ್ನು ತಡೆಗಟ್ಟಲು ಮತ್ತು ಆ ಶಿಶುಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಕಾಳಜಿವಹಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಶಿಶುವನ್ನು ತ್ಯಜಿಸಿದಾಗ ಮಗುವಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಯೋಜನೆಯ ಪ್ರಮುಖ ಉದ್ದೇಶ. ಇದು ಪರಿತ್ಯಕ್ತ ಪ್ರತಿಯೊಂದು ಮಗುವೂ ಕಾನೂನುಬದ್ಧವಾಗಿ ದತ್ತು ವ್ಯವಸ್ಥೆಯಡಿ ಬರುವುದನ್ನು ಖಾತರಿಪಡಿಸುತ್ತದೆ. ಹೆಚ್ಚಿನ ಪೋಕ್ಸೊ ಪ್ರಕರಣಗಳಲ್ಲಿ, ಲೈಂಗಿಕ ದೌರ್ಜನ್ಯ ಅಥವಾ ಅಸುರಕ್ಷಿತ ಲೈಂಗಿಕತೆಯ ನಂತರ ಹುಡುಗಿಯರು ತಾವು ಗರ್ಭಿಣಿಯಾಗಿದ್ದೇವೆ ಎಂದು ತಡವಾಗಿ ಅರಿತುಕೊಳ್ಳುತ್ತಾರೆ. ಅವರು ಪೊಲೀಸ್ ಕ್ರಮ ಮತ್ತು ಶಿಕ್ಷೆಗೆ ಹೆದರಿ ಮಗುವನ್ನು ತ್ಯಜಿಸುತ್ತಾರೆ ಎಂದು ಬೆಂಗಳೂರು ಪೂರ್ವ ವಲಯದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮೀನಾಕ್ಷಿ ಎಸ್ ಕಬೇಡಿ ತಿಳಿಸಿರುವುದನ್ನು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಇವೆ ಮಮತೆಯ ತೊಟ್ಟಿಲುಗಳು?
ಬೆಂಗಳೂರಿನ ಪೂರ್ವ ವಲಯದ ಏಳು ಸ್ಥಳಗಳಲ್ಲಿ ಸಿಸಿಟಿವಿ ಮೇಲ್ವಿಚಾರಣೆ ಇಲ್ಲದೆ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ. ಸಿವಿ ರಾಮನ್ ಜನರಲ್ ಆಸ್ಪತ್ರೆ, ವರ್ತೂರು ಮತ್ತು ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸೇಂಟ್ ಮೈಕೆಲ್ಸ್ ಹೋಮ್ ಕಾನ್ವೆಂಟ್, ಶಿಶು ಮಂದಿರ ಮತ್ತು ತಾಲ್ಲೂಕು ಆಸ್ಪತ್ರೆ ಮತ್ತು ಕೆಆರ್ ಪುರಂನ ಡಿಸಿಪಿಒಗಳ ಬಳಿ ಮಮತೆಯ ತೊಟ್ಟಿಲುಗಳಿವೆ. ಎಲ್ಲೆಲ್ಲೋ ಚರಂಡಿಗೆ ಶಿಶುವನ್ನು ಹಾಕಿ ಹೋಗುವ ಬದಲು ಈ ತೊಟ್ಟಿಲುಗಳಲ್ಲಿಡಬಹುದು. ತಾಯಂದಿರು 1098 ಅಥವಾ 112 ಗೆ ಸಹ ಕರೆ ಮಾಡಬಹುದು ಮತ್ತು ಮಾಹಿತಿಯನ್ನು ನಾವೂ ಗೋಪ್ಯವಾಗಿ ಇಡುತ್ತೇವೆ. ನಾವು ಈಗ ಮಕ್ಕಳ ದತ್ತು ಸ್ವೀಕಾರಕ್ಕಿಂತ ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಮೀನಾಕ್ಷಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
For More Updates Join our WhatsApp Group :
