ತುಮಕೂರು: ಕಾಮಗಾರಿ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚಕ್ಕೆ ಕೈ ಒಡ್ಡಿದ್ದ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ತಿಪಟೂರು ವಿಭಾಗದ ಇಬ್ಬರು ಎಂಜಿನಿಯರುಗಳು ಮಂಗಳವಾರ ಲೋಕಾಯಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ನಗರದ ಪ್ರವಾಸಿ ಮಂದಿರದ ಬಳಿ ₹34,500 ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಸಿ.ಸ್ವಾಮಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಲ್ ಮಾಡಿಕೊಡಲು ಹಣಕ್ಕೆ ಒತ್ತಾಯಿಸಿದ್ದ ಮತ್ತೊಬ್ಬ ಎಂಜಿನಿಯರ್ ಸುಹಾಸ್ ಎಂಬುವರನ್ನು ತಿಪಟೂರು ಕಚೇರಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯವರ್ತಿಯಾಗಿ ಕೆಲಸ ಮಾಡಿದ ಕಂಪ್ಯೂಟರ್ ಆಪರೇಟರ್ ಹರೀಶ್ ಎಂಬುವರ ವಿಚಾರಣೆ ಮುಂದುವರಿದಿದೆ.
ತಿಪಟೂರು ತಾಲ್ಲೂಕಿನಲ್ಲಿ ಶಾಲೆ ದುರಸ್ತಿ ಮಾಡಿದ ₹6.50 ಲಕ್ಷ ಬಿಲ್ ಪಾವತಿಗೆ ಹೊಸದುರ್ಗ ಭಾಗದ ಗುತ್ತಿಗೆದಾರ ಸುನಿಲ್ ಮನವಿ ಮಾಡಿಕೊಂಡಿದ್ದರು. ಬಿಲ್ ಹಣ ಪಾವತಿಗೆ ₹47,500 ಲಂಚಕ್ಕೆ ಇಬ್ಬರು ಎಂಜಿನಿಯರುಗಳು ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ₹13 ಸಾವಿರವನ್ನು ಕಂಪ್ಯೂಟರ್ ಆಪರೇಟರ್ ಹರೀಶ್ ಬ್ಯಾಂಕ್ ಖಾತೆಗೆ ಸುನಿಲ್ ವರ್ಗಾವಣೆ ಮಾಡಿದ್ದರು. ಉಳಿದ ₹34,500 ಹಣವನ್ನು ತೆಗೆದುಕೊಳ್ಳುವ ಸಮಯದಲ್ಲಿ ಸ್ವಾಮಿ ಸಿಲುಕಿದ್ದಾರೆ.
ಪ್ರತಿನಿತ್ಯ ಸ್ವಾಮಿ ತುಮಕೂರಿನಿಂದ ತಿಪಟೂರಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದರು. ಮಂಗಳವಾರ ರೈಲು ನಿಲ್ದಾಣಕ್ಕೆ ತೆರಳುವ ಮುನ್ನ ಪ್ರವಾಸಿ ಮಂದಿರದ ಬಳಿ ಹಣ ತೆಗೆದುಕೊಳ್ಳುತ್ತಿದ್ದಾಗ ದಾಳಿ ಮಾಡಲಾಗಿದೆ. ಲೋಕಾಯುಕ್ತ ವರಿಷ್ಠಾಧಿಕಾರಿ ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ ದಾಳಿ ನಡೆದಿದೆ.
For More Updates Join our WhatsApp Group :
