ಚಿಕ್ಕಮಗಳೂರು: ಆಸ್ತಿ ಮೇಲಿನ ಆಸೆಗೆ ಸಾಕು ತಾಯಿಯನ್ನೇ ಮಗಳು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ನಡೆದಿದೆ. ಕುಸುಮ (62) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ಸುಧಾಳನ್ನ ಪೊಲೀಸರು ಬಂಧಿಸಿದ್ದಾರೆ. ರಾತ್ರಿ ವೇಳೆ ಮಲಗಿದ್ದ ಕುಸುಮಾರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಸುಧಾ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಕುಸುಮ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದವರಾಗಿದ್ದು, ಬದುಕಿಗಾಗಿ ಬಾಳೆಹೊನ್ನೂರಿನ ಬಂಡಿಮಠದಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಇವರನ್ನುಗಂಡ ಬಿಟ್ಟು ಹೋಗಿದ್ದ. ಹೀಗಾಗಿ ಒಬ್ಬಂಟಿ ಜೀವನಕ್ಕೆ ಆಸರೆಯಾಗಲೆಂದು ತನ್ನ ತಂಗಿಯ ಮಗಳನ್ನೇ ತಂದು ಮುದ್ದಾಗಿ ಸಾಕಿದ್ದರು. ಮೈಸೂರಿಗೆ ಮದುವೆಯನ್ನೂ ಮಾಡಿಕೊಟ್ಟು, ಎನ್.ಆರ್. ಪುರದಲ್ಲಿ ತಮಗೆ ಇದ್ದ ಸ್ವಲ್ಪ ಕಾಫಿ ತೋಟವನ್ನ ಸುಧಾಳ ಹೆಸರಿಗೆ ವಿಲ್ ಕೂಡ ಮಾಡಿದ್ದರು. ಆದರೆ ಬಳಿಕ ಕುಸುಮ ಸಾಕು ಮಗಳಿಂದ ಆ ಆಸ್ತಿಯನ್ನು ಹಿಂಪಡೆದಿದ್ದರು. ನೀಡಿದ್ದ ಆಸ್ತಿ ಹಿಂಪಡೆದ ಸಿಟ್ಟಲ್ಲಿದ್ದ ಸುಧಾ, ಸ್ವಲ್ಪ ಆಸ್ತಿ ಮಾರಿದ್ದ ಹಣವನ್ನ ಕೊಡುವಂತೆ ಕುಸುಮಾಗೆ ಪೀಡಿಸುತ್ತಿದ್ದರು. ಆಗಾಗ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯೂ ನಡೆಯುತ್ತಿತ್ತು ಎನ್ನಲಾಗಿದೆ.
ಅಲ್ಲದೆ, ಸದ್ಯ ಕುಸುಮ ವಾಸವಿದ್ದ ಬಂಡಿಮಠದ ಮನೆ ಭದ್ರಾ ನದಿಯ ತೀರದಲ್ಲಿದ್ದು, ಮಳೆಗಾಲದಲ್ಲಿ ಈ ಭಾಗ ಸಂಪೂರ್ಣ ಮುಳುಗಡೆಯಾಗುತ್ತೆ. ಹೀಗಾಗಿ ಗ್ರಾಮಸ್ಥರನ್ನ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಪ್ಲ್ಯಾನ್ ಮಾಡಿರುವ ಕಾರಣ, ಮನೆ ತನ್ನ ಹೆಸರಿಗೆ ಬಂದ್ರೆ ಪರಿಹಾರ ಕೂಡ ತನಗೆ ಸಿಗುತ್ತೆ ಎಂಬ ಉದ್ದೇಶ ಸುಧಾದಾಗಿತ್ತು. ಹೀಗಾಗಿ ಸೋಮವಾರ (ನ.10) ಮೈಸೂರಿನಿಂದ ಬಂಡಿಮಠಕ್ಕೆ ಬಂದಿದ್ದ ಸುಧಾ, ರಾತ್ರಿ ಕುಸುಮಾ ಮಲಗಿದ್ದ ವೇಳೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ಕುಸುಮ ಸಾವಿನ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ನಾಟಕವಾಡಿದ್ದು, ಹಾರ್ಟ್ ಅಟ್ಯಾಕ್ನಿಂದ ಸಾಕು ತಾಯಿ ಮೃತಪಟ್ಟಿದ್ದಾಳೆ ಎಂದು ಎಲ್ಲರನ್ನೂ ನಂಬಿಸಿದ್ದಳು. ತಾನೇ ಮುಂದೆ ನಿಂತು ಅಂತ್ಯಕ್ರಿಯೆಯನ್ನೂ ಮಾಡಿಸಿದ್ದಳು.
For More Updates Join our WhatsApp Group :
