ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿರೋಡಿನ ಸರ್ಕಲ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿರೋಡಿನ ಸರ್ಕಲ್ನಲ್ಲಿ ಇನ್ನೋವಾ ಕಾರೊಂದು ಎನ್.ಜಿ ಸರ್ಕಲ್ಗೆ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರಿನಲ್ಲಿದ್ದ ರಮ್ಯ(23), ರವಿ(64), ನಂಜಮ್ಮ(75) ಮೃತ ದುರ್ದೈವಿಗಳು. ಮೃತರು ಬೆಂಗಳೂರಿನ ಪೀಣ್ಯದವರಾಗಿದ್ದು, ಉಡುಪಿ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು. ಕಾರಿನಲ್ಲಿ ಇದ್ದ ಪ್ರಯಾಣಿಕರಲ್ಲಿ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಎಂಬ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರೋಡು – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣವಾದ ನೂತನ ಸರ್ಕಲ್ ಅವೈಜ್ಞಾನಿಕವಾಗಿರುವುದರಿಂದಲೇ ಈ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
For More Updates Join our WhatsApp Group :
