ಧಾರವಾಡ: ಮಕ್ಕಳನ್ನು ಅಪೌಷ್ಟಿಕತೆ ಸಮಸ್ಯೆಯಿಂದ ಪಾರು ಮಾಡಲು ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತೆ. ಆದರೂ ಅದರ ಪ್ರಯೋಜನ ದೊರೆಯದ ಪರಿಣಾಮ ಅನೇಕ ಮಕ್ಕಳು ನಾನಾ ಸಮಸ್ಯೆಯಿಂದ ಬಳಲುತ್ತಲೇ ಇದ್ದಾರೆ. ಇದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ. ಇತ್ತೀಚಿಗೆ ನಡೆಸಲಾದ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅರ್ಧ ಲಕ್ಷದಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿರುವ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಜಿಲ್ಲಾ ಆರೋಗ್ಯ ಇಲಾಖೆಯ ವರದಿ ಪ್ರಕಾರ 1ರಿಂದ 14 ವರ್ಷದೊಳಗಿನ 58,159 ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಕಂಡು ಬಂದಿದೆ. ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕ ಆಹಾರ, ಆರೋಗ್ಯ ನ್ಯೂನತೆಗಳ ಮೇಲೆ ನಿಗಾ ಇಡಲು ಸರಕಾರ ‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ’ ಜಾರಿಗೊಳಿಸಿದೆ. ಇದರಡಿ ಪ್ರತಿ ವರ್ಷ ಎರಡು ಬಾರಿ 1ರಿಂದ 14 ವರ್ಷದ ಮಕ್ಕಳ ಆರೋಗ್ಯ ತಪಾಸಣೆಯನ್ನು ಅಂಗನವಾಡಿ ಹಾಗೂ ಶಾಲೆಗಳಲ್ಲಿ ನಡೆಸಲಾಗುತ್ತೆ. ಈ ಹಿನ್ನಲೆ ಜಿಲ್ಲೆಯಲ್ಲಿ ಪ್ರಸ್ತುತ 1,80,882 ಮಕ್ಕಳ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 30,598 ಮಕ್ಕಳು ಅಲ್ಪ, 27,282 ಮಕ್ಕಳು ಮಧ್ಯಮ ಹಾಗೂ 279 ಮಕ್ಕಳು ತೀವ್ರತರದ ರಕ್ತಹೀನತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ.
ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ, ಜಂಕ್ ಆಹಾರ ಪದಾರ್ಥಗಳ ಸೇವನೆ ಸೇರಿದಂತೆ ಹತ್ತಾರು ಕಾರಣಗಳಿಂದ ಮಕ್ಕಳ ದೇಹದಲ್ಲಿ ರಕ್ತ ಉತ್ಪಾದನೆ ಕಡಿಮೆಯಾಗುತ್ತಿದೆ. ಕೆಲ ಮಕ್ಕಳಲ್ಲಿ ಜೆನೆಟಿಕ್ ಆಗಿಯೇ ರಕ್ತಹೀನತೆ ಕಾಡುತ್ತಿದೆ. ಇದರಿಂದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜೊತೆಗೆ ಏಕಾಗ್ರತೆ ಸಾಧಿಸಲು ಮತ್ತು ಆಟೋಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಇದು ಮಕ್ಕಳ ಕಲಿಕೆ ಮೇಲೆ ನೇರ ಪರಿಣಾಮ ಉಂಟು ಮಾಡುತ್ತಿದೆ.
For More Updates Join our WhatsApp Group :
