ಧಾರವಾಡ: 10 ಜನಕ್ಕಿಂತ ಹೆಚ್ಚು ಜನಸೇರಿದರೆ ಅಕ್ರಮ ಕೂಟವೆಂದು ಪರಿಗಣನೆ ಮಾಡೋದಾಗಿ ಹೇಳಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಮಧ್ಯಂತರ ತಡೆ ವಿಚಾರ ಸಂಬಂಧ ಆದೇಶವನ್ನು ಅರ್ಜಿದಾರರಿಗೆ ಸೀಮಿತಗೊಳಿಸಲು ಎಜಿ ಮಾಡಿದ್ದ ಮನವಿಯನ್ನ ಹೈಕೋರ್ಟ್ನ ಧಾರವಾಡ ವಿಭಾಗೀಯ ಪೀಠ ನಿರಾಕರಿಸಿದೆ. ಸರ್ಕಾರದ ಆದೇಶ ನಾಗರಿಕರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಹೀಗಾಗಿ ಮಧ್ಯಂತರ ಆದೇಶವನ್ನು ಅರ್ಜಿದಾರರಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿಳಿಸಿದೆ.
ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಏಕೆ ಹೋಗಲಿಲ್ಲ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದು, ಆ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಎಜಿ ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ನ್ಯಾಯಪೀಠ ಸೂಚಿಸಿದ್ದು,ಅಡ್ವೋಕೇಟ್ ಜನರಲ್ 4 ವಾರಗಳ ಕಾಲಾವಕಾಶ ಕೇಳಿದ್ದಾರೆ. ಈ ಹಿನ್ನಲೆ ಡಿ.15ರ ವರೆಗೆ ಮಧ್ಯಂತರ ತಡೆಯಾಜ್ಞೆ ವಿಸ್ತರಿಸಿದ ಕೋರ್ಟ್, ಅಂದು ಮಧ್ಯಾಹ್ನ 2.30ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ RSS ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪುನಶ್ಚೇತನ ಸೇವಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಪೀಠ, ಸರ್ಕಾರದ ಆದೇಶಕ್ಕೆ ಅಕ್ಟೋಬರ್ 28ರಂದು ಮಧ್ಯಂತರ ತಡೆಯಾಜ್ಞೆ ನೀಡಿದ್ದರು.ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ದ್ವಿಸದಸ್ಯ ಪೀಠದ ಮೊರೆ ಹೋಗಿತ್ತು. ಸರ್ಕಾರದ ಸ್ವತ್ತುಗಳಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದಲೇ ನಿರ್ಬಂಧ ವಿಧಿಸಲಾಗಿದೆ. ಖಾಸಗಿ ಸಂಸ್ಥೆಗಳು ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಯಲ್ಲಿ ಅನುಮತಿಯಿಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಹೈಕೋರ್ಟ್ ಕಟ್ಟಡ ಖಾಲಿ ಇದೆ ಎಂದು ಅಲ್ಲಿ ಕಾರ್ಯಕ್ರಮ ಮಾಡಲಾಗುವುದಿಲ್ಲ. ಅದೇ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳ ಬಳಕೆಗೂ ಅನುಮತಿ ಅಗತ್ಯ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರ ವಾದ ಮಂಡಿಸಿದ್ದರು.
For More Updates Join our WhatsApp Group :
