ಬೆಳಗಾವಿ: ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾಲು ಸಾಲು ಸಾವಿನ ಬೆನ್ನಲ್ಲೇ ಮೃಗಾಲಯದ ಸುತ್ತ ಮುತ್ತಲಿನ ಗ್ರಾಮಗಳಲ್ಲಿಯೂ ಸಾಂಕ್ರಾಮಿಕ ರೋಗದ ಭೀತಿ ಆರಂಭವಾಗಿದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 38 ಕೃಷ್ಣಮೃಗಳ ಪೈಕಿ 31 ಮೃತಪಟ್ಟಿದ್ದು, ಗಳಲೆ ರೋಗದಿಂದ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸುತ್ತಲಿನ ಗ್ರಾಮದಲ್ಲೂ ಗಳಲೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಅರಣ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಸಸ್ಯಾಹಾರದ ಪ್ರಾಣಿಗಳಿಗೂ ಗಳಲೆ ರೋಗ ಹರಡುವ ಸಾಧ್ಯತೆ ಇರುವುದರಿಂದ, ಪ್ರಾಣಿಗಳನ್ನ ಸಾಕಿರುವವರು ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಗಳಲೆ ರೋಗ ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆಯೂ ಮನವಿ ಮಾಡಲಾಗಿದೆ.
ಮೃತ ಕೃಷ್ಣ ಮೃಗಗಳ ಕಿಡ್ನಿ, ಹಾರ್ಟ್, ಲಿವರ್, ರಕ್ತ ಎಲ್ಲವನ್ನೂ ವೈದ್ಯರು ಈಗಾಗಲೇ ಸ್ಯಾಂಪಲ್ ಪಡೆದಿದ್ದು ಅವನ್ನು ಲ್ಯಾಬ್ಗೆ ಕಳುಹಿಸಿಕೊಡಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಇಂದು ಹೊರಬರಲಿದ್ದು, ಮಧ್ಯಾಹ್ನದ ವೇಳೆಗೆ ಸಾವಿಗೆ ನಿಖರ ಕಾರಣ ಗೊತ್ತಾಗುವ ಸಾಧ್ಯತೆ ಇದೆ. ಅರಣ್ಯ ಇಲಾಖೆ ಮತ್ತು ಸಚಿವರಿಗೆ ವೈದ್ಯರ ತಂಡ ಈ ವರದಿಯನ್ನು ನೀಡಲಿದೆ ಎನ್ನಲಾಗಿದೆ. ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃಗಾಲಯ ಕೂಡ ಪರಿಶೀಲನೆ ಆಗಿದೆ. ಘಟನೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಕಂಡು ಬಂದಿಲ್ಲ. 8 ಕೃಷ್ಣಮೃಗಗಳು ಮೃತಪಟ್ಟ ಸಂದರ್ಭದಲ್ಲಿಯೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಅದಾಗಿಯೂ ಎಲ್ಲಿಯಾದರೂ ಸಿಬ್ಬಂದಿ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ
ನವೆಂಬರ್ 13ರಿಂದ ಹಂತ ಹಂತವಾಗಿ ಒಟ್ಟು 31 ಕೃಷ್ಣ ಮೃಗಗಗಳು ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಮೃತಪಟ್ಟಿವೆ. ಕೃಷ್ಣಮೃಗಗಳು ಮೃತಪಟ್ಟ ಪ್ರದೇಶವನ್ನು ಮೃಗಾಲಯದ ಸಿಬ್ಬಂದಿ ನಿರ್ಬಂಧಿಸಿದ್ದು, ಸೋಂಕು ಹರಡದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಆ ಪ್ರದೇಶಕ್ಕೆ ಗ್ರೀನ್ ಮ್ಯಾಟ್ ಕಟ್ಟಿ ಸಾರ್ವಜನಿಕರು ಅಲ್ಲಿ ಓಡಾಡದಂತೆ ನೋಡಿಕೊಳ್ಳಲಾಗಿದೆ.
For More Updates Join our WhatsApp Group :
