ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಸಂಘ ಸಂಸ್ಥೆಗಳಲ್ಲಿ ಸ್ಥಾನಗಳನ್ನು ಹೊಂದಿಲ್ಲ. ಹಾಗಿದ್ದರೂ ಸಹ ಚಿತ್ರರಂಗದ ಪರವಾಗಿ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಲೇ ಇರುತ್ತಾರೆ. ಜಗನ್ ಸರ್ಕಾರದ ಅವಧಿಯಲ್ಲಿ ಜಗನ್ ತಂದ ಕೆಲವು ನಿಯಮಗಳಿಂದ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ನಟರು, ನಿರ್ಮಾಪಕರು ಬಹಿರಂಗವಾಗಿ ಸರ್ಕಾರದ ವಿರುದ್ಧ ನಿಂದನೆ, ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದರು. ಆದರೆ ಚಿರಂಜೀವಿ, ತಮ್ಮ ಸ್ಟಾರ್ಗಿರಿಯನ್ನು ಪಕ್ಕಕ್ಕಿಟ್ಟು ಜಗನ್ ಮನೆಗೆ ಹೋಗಿ ಅವರಲ್ಲಿ ಮನವಿ ಮಾಡಿಕೊಂಡು ಚಿತ್ರರಂಗಕ್ಕೆ ಅನುಕೂಲಕರವಾಗುವಂತೆ ನಿಯಮಗಳನ್ನು ತಿದ್ದಿಸುವಲ್ಲಿ ಯಶಸ್ವಿ ಆಗಿದ್ದರು. ಈಗಲೂ ಸಹ ಅವರು ಅಂಥಹುದೇ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಭಾಗವಾಗಿಯೇ ಇತ್ತೀಚೆಗೆ ಸೈದರಾಬಾದ್ ಪೊಲೀಸರನ್ನು ಭೇಟಿ ಆಗಿದ್ದರು.
ಅಸಲಿಗೆ ಕೆಲ ತಿಂಗಳ ಹಿಂದೆಯೇ ನಟ ಚಿರಂಜೀವಿ ಅವರು ಗೆಳೆಯ ನಾಗಾರ್ಜುನ ಸೇರಿದಂತೆ ಇನ್ನೂ ಕೆಲವು ನಿರ್ಮಾಪಕರುಗಳೊಟ್ಟಿಗೆ ಸೈಬರಾಬಾದ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಪೈರಸಿ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ಚಿರಂಜೀವಿ ಮನವಿಗೆ ಪ್ರತಿಕ್ರಿಯಿಸಿದ್ದ ಪೊಲೀಸರು ಕೆಲ ಪೈರಸಿಕೋರರನ್ನು ಬಂಧಿಸಿದ್ದರು. ಆದರೂ ಸಹ ಕೆಲ ಪ್ರಮುಖ ಪೈರಸಿಕೋರರನ್ನು ಬಂಧಿಸುವುದು ಬಾಕಿ ಇತ್ತು. ಇತ್ತೀಚೆಗಷ್ಟೆ ತೆಲುಗಿನ ಕುಖ್ಯಾತ ಪೈರಸಿ ವೆಬ್ಸೈಟ್ ಸ್ಥಾಪಕ ರವಿ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ತೆಲುಗು ಸಿನಿಮಾ ನಿರ್ಮಾಪಕರುಗಳನ್ನು ವರ್ಷಗಳಿಂದಲೂ ಕಾಡಿದ್ದ, ನೂರಾರು ಕೋಟಿ ಹಣ ನಷ್ಟಕ್ಕೆ ಕಾರಣವಾಗಿದ್ದ ಐಬೊಮ್ಮ ಪೈರಸಿ ವೆಬ್ಸೈಟ್ನ ಸ್ಥಾಪಕ ರವಿ ಅನ್ನು ಇತ್ತೀಚೆಗಷ್ಟೆ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ ಹಾಗೂ ಇತರರು ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗರೂ ಆಗಿರುವ ಸಜ್ಜನರ್ ಅವರನ್ನು ಭೇಟಿಯಾಗಿ ಖುದ್ದಾಗಿ ಅಭಿನಂದನೆ ಸಲ್ಲಿಸಿದರು.
For More Updates Join our WhatsApp Group :

